Advertisement

ಅನಧಿಕೃತ ಬಡಾವಣೆಯ ಕಟ್ಟಡಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ

10:12 PM Sep 15, 2021 | Team Udayavani |

ಹುಣಸೂರು:ಅನಧಿಕೃತ ಬಡಾವಣೆಯ ಕಟ್ಟಡಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲವೆಂದು ಚೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಸುನಿಲ್‌ಕುಮಾರ್ ತಿಳಿಸಿದರು.

Advertisement

ನಗರದ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಂದ ಬಂದ ಹಲವಾಲು ಆಲಿಸಿ ಮಾತನಾಡಿದ ಅವರು ನಗರದಲ್ಲಿ ಸಾಕಷ್ಟು ಅನಧಿಕೃತ ಬಡಾವಣೆಗಳಿಗೆ, ನಗರಸಭೆವತಿಯಿಂದ ಎನ್.ಓ.ಸಿ.ಪಡೆದಿದ್ದಲ್ಲಿ ಮಾತ್ರ ಸಂಪರ್ಕ ಕಲ್ಪಿಸಲು ಅವಕಾಶವಿದೆ ಇಲ್ಲದಿದ್ದಲ್ಲಿ ಬಡಾವಣೆ ಅಧಿಕೃತಗೊಳಿಸಿಕೊಂಡಲ್ಲಿ ಮಾತ್ರ ಸಂಪರ್ಕ ನೀಡಲು ಸಾಧ್ಯವೆಂದರು.

ಹುಣಸೂರಿನ ನರಸಿಂಹಸ್ವಾಮಿ ಬಡಾವಣಿಯ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ನೀಡಬೇಕೆಂದು ಬಡಾವಣೆಯ ಸದಾನಂದರ ಕೋರಿಕೆಗೆ ಅನಧಿಕೃತ ಬಡಾವಣೆಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲ, ಬಡಾವಣೆ ನಿರ್ಮಾಣ ಮಾಡಿದವರ ಮೇಲೆ ಒತ್ತಡ ಹಾಕಿ ಸಕ್ರಮ ಗೊಳಿಸಿಕೊಳ್ಳಿ ಆನಂತರ ಅರ್ಜಿಸಲ್ಲಿಸಿದಲ್ಲಿ ಸಂಪರ್ಕ ನೀಡಬಹುದಾಗಿದೆ ಎಂದರು.

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ:

ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್ ಮಾತನಾಡಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಎಸ್.ಸಿ-ಎಸ್.ಟಿ.ಫಲಾನುಭವಿಗಳಿಗೆ ನೀರಾವರಿಗಾಗಿ ಪಂಪ್‌ಸೆಟ್ ಸೌಲಭ್ಯ ಕಲ್ಪಿಸಿದೆ. ಆದರೆ 2019ರಿಂದಲೂ ಕೊಳವೆಬಾವಿ ಕೊರೆಸಿ, ಪೈಪ್ ಅಳವಡಿಸಿದ್ದಾರೆ. ಆದರೆ ಈವರೆವಿಗೂ 42 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲವೆಂಬ ದೂರಿಗೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಿಗಮದಿಂದ ಅಂದಾಜುಪಟ್ಟಿ ಮಾತ್ರ ನೀಡಲಾಗುವುದು. ಉಳಿದ ಎಲ್ಲಾ ಕಾಮಗಾರಿಗಳನ್ನು ಅವರೇ ನಿರ್ವಹಿಸಲಿದ್ದು, ಪೂರ್ಣಗೊಂಡ ಮಾಹಿತಿ ನೀಡಿದಲ್ಲಿ ಪರಿಶೀಲಿಸಿ ವಿದ್ಯುತ್ ಸಂಪರ್ಕ ನೀಡಲಾಗುವುದೆಂದು ಇ.ಇ.ಸುನಿಲ್ ಸ್ಪಷ್ಟಪಡಿಸಿದರು.

Advertisement

ಲೈನ್ ಬಲಾಯಿಸಲು ಸೂಚನೆ:

ಸರಕಾರದ ಇತ್ತೀಚಿನ ಸೂಚನೆಯಂತೆ ಶಾಲಾ-ಕಾಲೇಜು ಆವರಣದಲ್ಲಿರುವ ಟಿ.ಸಿ ಮತ್ತು ಶಾಲಾ ಕಟ್ಟಡಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್ ಮಾರ್ಗಗಳನ್ನು ತೆರವುಗೊಳಿಸಲು ಶಾಲಾ ಮುಖ್ಯಸ್ಥರು ಅಥವಾ ಬಿಇಓ ಮೂಲಕ ಲಿಖಿತವಾಗಿ ಮಾಹಿತಿ ನೀಡಿದ್ದಲ್ಲಿ ಆದ್ಯತೆ ಮೇರೆಗೆ ತೆರವು ಗೊಳಿಸಲಾಗುವುದು. ಈ ಸಂಬಂಧ ಎಲ್ಲಾ ವಲಯಗಳ ಇಂಜಿನಿಯರ್‌ಗಳಿಗೆ ಶಾಲಾ-ಕಾಲೇಜುಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಸೌರ ಗೃಹ ಯೋಜನೆಗೆ ಆದ್ಯತೆ:

ಚೆಸ್ಕಾಂವತಿಯಿಂದ ಸಬ್ಸಿಡಿ-ರಿಯಾಯತಿ ದರದಲ್ಲಿ ಮನೆಗಳ ಸೋಲಾರ್ ಮೇಲ್ಚಾವಣಿ ಅಳವಡಿಸುವ ಸೌರ ಗೃಹ ಯೋಜನೆ ಜಾರಿಗೆ ತಂದಿದ್ದು, ಮನೆಗಳವರು ತಮ್ಮ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸಿಕೊಂಡು ಉಪಯೋಗಿಸಿ, ಉಳಿತಾಯವಾದ ವಿದ್ಯುತ್‌ನ್ನು ಚೆಸ್ಕಾಂಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ನಿಮ್ಮ ಮನೆಗೆ ನೀವೇ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು, ಮಾಸಿಕ ವಿದ್ಯುತ್ ಉಳಿತಾಯವಾಗಲಿದೆ. ಕಡಿಮೆ ಬಂಡವಾಳದ ವೆಚ್ಚದ ಮೇಲ್ಚಾವಣಿಯ ಸುರಕ್ಷತೆಗೂ ನೆರವಾಗಲಿದೆ.

ಇದಕ್ಕಾಗಿ ಆಸಕ್ತರು ಚೆಸ್ಕಾಂನ ಆನ್‌ಲೈನ್ ಅಥವಾ ಆಫ್ ಲೈನ್ ಮೂಲಕವೂ ಅರ್ಜಿಸಲ್ಲಿಸಬಹುದಾಗಿದೆ. ಆದ್ಯತೆ ಆಧಾರದ ಮೇಲೆ ಹಾಗೂ ತಾಂತ್ರಿಕ ಕಾರ್ಯದ ಸಾಧ್ಯತೆ ಅನುಸಾರ ಪರಿಗಣಿಸಲಾಗುವುದು. ಈ ಯೋಜನೆ ಚೆಸ್ಕಾಂನ ಗೃಹ ಬಳಕೆದಾರರು, ಗೃಹೋಪಯೋಗಿ ಅಪಾರ್ಟ್ಮೆಂಟ್‌ಗಳು ಹಾಗೂ ಗುಂಪುವಸತಿಗಳ ಗ್ರಾಹಕರಿಗೆ ಮಾತ್ರ ಅವಕಾಶವಿದ್ದು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಸುರಕ್ಷಿತವಾಗಿ ಪಾಕಿಸ್ಥಾನ ತಲುಪಿದ ಅಫ್ಘಾನ್‌ ವನಿತಾ ಫುಟ್ಬಾಲಿಗರು

ನಿಲುವಾಗಿಲಿನ ಸುಭಾಷ್ ನಮ್ಮ ಮನೆಗೆ ಕಲ್ಪಿಸಿರುವ ವಿದ್ಯುತ್ ಲೈನ್ಅನ್ನು ಪಕ್ಕದ ಮನೆಯವರು ತಮ್ಮ ಮನೆ ಮೇಲಿಂದ ಹಾದು ಹೋಗಿದೆ ಎಂದು ಕಟ್ ಮಾಡುತ್ತಿರುವುದರಿಂದ ತೊಂದರೆಯಾಗಿದ್ದು, ಮನೆ ಬಳಿ ಕಂಬ ಅಳವಡಿಸಿ ಲೈನ್ ನೀಡಬೇಕೆಂಬ ಮನವಿಗೆ ನಿಗಮದಿಂದ ಪ್ರತ್ಯೇಕ ಕಂಬ-ಲೈನ್ ನೀಡಲು ಸಾಧ್ಯವಿಲ್ಲ, ಹಣ ಪಾವತಿಸಿದಲ್ಲಿ ಮಾತ್ರ ಸೌಲಭ್ಯ ಕಲ್ಪಿಸಲಾಗುವುದೆಂದರು.

ಹರವೆರಾಮೇನಹಳ್ಳಿಯ ಮೂಗನಾಯ್ಕರು ಪಕ್ಕದ ಜಮೀನಿನವರಿಗೆ ನಮ್ಮ ಭೂಮಿ ಮೂಲಕ ಲೈನ್ ಹೋಗಿದ್ದು, ತಂತಿಗಳು ಜೋತು ಬಿದ್ದಿದ್ದು, ಅಪಾಯ ಕಾದಿದೆ. ಅವರಿಗೆ ಬೇರೆಡೆಯಿಂದ ಸಂಪರ್ಕ ನೀಡುವಂತೆ ಮಾಡಿದ ಮನವಿಗೆ ಆರೀತಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಇಇ ಸಿದ್ದಪ್ಪರಿಗೆ ಇ.ಇ.ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆ.ಇ.ಗಳಾದ ಯಶಸ್ವಿನಿ, ವಿಜಯಕುಮಾರ್, ಮಲ್ಲಪ್ಪ ಸೇರಿದಂತೆ ಹಲವಾರು ಗ್ರಾಹಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next