ಹುಣಸೂರು: ಹಲವಾರು ಮೇಕೆ, ಬೀದಿನಾಯಿಗಳನ್ನು ಭಕ್ಷಿಸಿ ವದ್ಲಿಮನುಗನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರನ್ನು ಭಯಬೀತಗೊಳಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ.
ಹುಣಸೂರು ತಾಲೂಕಿನ ವದ್ಲಿಮನುಗನಹಳ್ಳಿಯಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈವರೆಗೆ ಮೂರು ಮೇಕೆಗಳು ಹಾಗೂ ಹಲವಾರು ಬೀದಿ ನಾಯಿಗಳನ್ನು ಕೊಂದುಹಾಕಿದ್ದ ಚಿರತೆಯು ಕಳೆದ ಒಂದೂವರೆ ತಿಂಗಳಿನಿಂದ ಗ್ರಾಮಸ್ಥರನ್ನು ಭಯ ಭೀತಗೊಳಿಸಿತ್ತು. ಮೂರು ದಿನಗಳ ಹಿಂದೆ ಗ್ರಾಮದ ಕುಮಾರನಾಯಕರ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಮೇಕೆಯನ್ನು ಕೊಂದು ಹಾಕಿತ್ತು. ಕೊಂದು ಹಾಕಿದ್ದ ಮೇಕೆಯ ಮಾಂಸವನ್ನು ಬೋನಿನಲ್ಲಿಟ್ಟು ಸೆರೆಗೆ ಬಲೆ ಬೀಸಲಾಗಿತ್ತು. ಕೊನೆಗೂ ತಾನೇ ಬೇಟೆಯಾಡಿದ್ದ ಮೇಕೆ ಮಾಂಸ ತಿನ್ನಲು ಬಂದ ನಾಲ್ಕು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ತಿಂಗಳ ಹಿಂದೆಯೂ ಈ ಭಾಗದಲ್ಲಿ ಬೋನಿಟ್ಟು ಚಿರತೆ ಸೆರೆಗೆ ಕ್ರಮವಹಿಸಲಾಗಿತ್ತಾದರೂ ಚಳ್ಳೆಹಣ್ಣು ತಿನ್ನಿಸಿದ ಚಿರತೆಯು ಕೆಲವು ದಿನಗಳು ಇತ್ತ ಸುಳಿದಿರಲಿಲ್ಲ. ಮತ್ತೆ ಊರಿನ ಸಾಕು ಪ್ರಾಣಿಗಳನ್ನು ಬೇಟೆಯಾಡಲಾರಂಭಿಸಿದ ಚಿರತೆಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಎರಡು ದಿನಗಳ ಹಿಂದೆ ಮತ್ತೆ ಬೋನ್ ಇರಿಸಿ ಚಿರತೆ ಸೆರೆಗೆ ಕ್ರಮವಹಿಸಿದ್ದ ಅರಣ್ಯ ಸಿಬ್ಬಂದಿಗಳು ಕೊನೆಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಬಂಧಿಯಾಗಿದ್ದ ಚಿರತೆಯನ್ನು ನಾಗರಹೊಳೆ ಉದ್ಯಾನದಲ್ಲಿ ಬಂಧ ಮುಕ್ತಗೊಳಿಸಲಾಯಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Tulu: ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಆಗ್ರಹ