ಹುಣಸೂರು : ಮುಂದಿನ 25 ವರ್ಷಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಗರದಲ್ಲಿ 3 ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಈಗಾಗಲೆ ಎರಡು ಟ್ಯಾಂಕ್ ಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಕರಿಗೌಡ ಪಾರ್ಕ್ ನಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸುತ್ತಿರುವ 10 ಲಕ್ಷ ಲೀಟರ್‌ನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪರಿಶೀಳಿಸಿದ ನಂತರ ಮಾತನಾಡಿದ ಶಾಸಕರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ ನಗರೋತ್ಥಾನ ಹಂತ -3ರಡಿಯಲ್ಲಿ ಹೆಚ್ಚುವರಿ ಅನುದಾನದಡಿ 2.31 ಕೋಟಿರೂ ವೆಚ್ಚದಲ್ಲಿ ಕರೀಗೌಡ ಪಾರ್ಕ್ ನಲ್ಲಿ ಹಾಲಿ ಇರುವ ವಿತರಣಾ ಲೈನ್‌ಗೆ ಎಚ್.ಡಿ.ಪಿ.ಇ ಪೈಪ್ ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸಲಾಗುವುದು ಹಾಗೂ 10 ಲಕ್ಷ ಲೀ.ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು.
ಹಾಲಿ ಇರುವ ನೆಲಮಟ್ಟದ (ಗ್ರೌಂಡ್ ಲೆವೆಲ್)ಜಲಸಂಗ್ರಹಗಾರ ತೆರವುಗೊಳಿಸುವುದು. ಹಾಗೂ ಓವರ್ ಹೆಡ್ ಟ್ಯಾಂಕ್‌ಗೆ ಸೂಯೀಸ್‌ವಾಲ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೆ ನರಸಿಂಹಸ್ವಾಮಿ ತಿಟ್ಟು ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಎರಡು ಟ್ಯಾಂಕ್ ನಿರ್ಮಿಸಿದ್ದು, ಶಬ್ಬೀರ್ ನಗರ ಮತ್ತು ಇಲ್ಲಿ ಮತ್ತೊಂದು ಟ್ಯಾಂಕ್ ನಿರ್ಮಾಣವಾದಲ್ಲಿ ಮುಂದಿನ 20 ವರ್ಷಗಳವರೆಗೆ ನೀರಿನ ಸಮಸ್ಯೆ ನೀಗಲಿದೆ ಎಂದರು.
ಕಾಮಗಾರಿ ನಡೆಯುವ ವೇಳೆ ನಗರಸಭೆ ನೀರು ಸರಬರಾಜು ಮಂಡಳಿ, ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಆಗಾಗ್ಗೆ ಪರಿಶೀಲಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಮೀನಾ ಪರ್ವೀನ್, ಉಪಾಧ್ಯಕ್ಷ ದೇವನಾಯಕ, ನಗರದ ವಿವಿಧ ವಾರ್ಡ್ ಸದಸ್ಯರು, ಮಾಜಿಸದಸ್ಯರು. ಪೌರಾಯುಕ್ತ ರವಿಕುಮಾರ್, ಇಂಜಿನಿಯರ್ ಲೋಕೇಶ್, ರವಿದೀಪಕ್, ನೀರು ಸರಬರಾಜು ಮಂಡಳಿಯ ಎಇಇ ಮಹದೇವಪ್ರಭು, ಸೈಯದ್ ಅಪ್ಸರ್ ಸೇರಿದಂತೆ ಅನೇಕರಿದ್ದರು.