Advertisement

ವೈದ್ಯನಾಗುವ ಕನಸು ನುಚ್ಚುನೂರು, ಕಾಡುತಿದೆ ಸಾಲದ ಹೊರೆ : ಪ್ರಜ್ವಲ್ ನ ಮನದಾಳದ ಮಾತು

08:42 PM Mar 06, 2022 | Team Udayavani |

ಹುಣಸೂರು : ವೈದ್ಯನಾಗುವ ಕನಸು ಹೊತ್ತು ಉಕ್ರೇನ್‌ಗೆ ತೆರಳಿದ್ದೆ, ಯುದ್ದ ಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಮರಳಿದ್ದೇ ಪುಣ್ಯ, ಸಾಲ ಮಾಡಿ ಕಳುಹಿಸಿದ್ದರು, ಇದೀಗ ಮುಂದೇನೆಂಬ ಚಿಂತೆ ಕಾಡುತ್ತಿದೆ.

Advertisement

ಇದು ಉಕ್ರೇನ್‌ನಿಂದ ಭಾರತಕ್ಕೆ ವಾಪಾಸ್ಸಾಗಿರುವ ಹುಣಸೂರು ತಾಲೂಕಿನ ಹೆಗ್ಗಂದೂರಿನ ಎಚ್.ಕೆ.ಪ್ರಜ್ವಲ್‌ನ ಆತಂಕದ ನುಡಿ.

ಈತ ಉಕ್ರೇನ್‌ನ ಝಪ್ರಿಜಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಭಾನುವಾರ ಮುಂಜಾನೆ ಹುಣಸೂರಿನ ಮನೆಗೆ ಬಂದಿದ್ದು, ಇವರು ಉಕ್ರೇನಿನಲ್ಲಿ ಅನುಭವಿಸಿದ ಯಾತನೆಯನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು.

ಬಡ ಕುಟುಂಬದವನಾದ ನಾನು ವೈದ್ಯನಾಗುವ ಕನಸಿಗೆ ಅಪ್ಪ-ಅಮ್ಮ ಸಾಲ ಮಾಡಿ ದೂರದ ಉಕ್ರೇನ್‌ಗೆ ಕಳುಹಿಸಿದ್ದರು. ಮೂರನೇ ವರ್ಷದ ವಿದ್ಯಾರ್ಥಿಯಾದ ನಾನು ಚೆನ್ನಾಗಿಯೇ ಓದಿಕೊಂಡಿದ್ದೆ. ಆದರೆ ಯುದ್ದವೆಂಬುದು ನನ್ನ ಕನಸನ್ನು ನುಚ್ಚು ನೂರು ಮಾಡಿತು. ತೊಂದರೆಗೆ ಸಿಲುಕಿದರೂ ಸುರಕ್ಷಿತವಾಗಿ ವಾಪಾಸ್ ಆದನೆಂಬ ಖುಷಿ ಒಂದೆಡೆಯಾದರೆ, ನನ್ನ ವೈದ್ಯ ಕನಸು ಸಾಕಾರವಾಗುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಇದೀಗ ಸರಕಾರವೇ ನಮ್ಮ ಶೈಕ್ಷಣಿಕ ನೆರವಿಗೆ ಬರಬೇಕು ಎಂದು ಆಶಿಸಿದರು.

ಇದನ್ನೂ ಓದಿ : ಬಾಲ್ಯ ವಿವಾಹ ಮಾಡಿದರೆ ಎರಡು ವರ್ಷ  ಶಿಕ್ಷೆ ಮತ್ತು ದಂಡ : ಯಲ್ಲಪ್ಪ ಗದಾಡಿ

Advertisement

ರೆಡ್ ಕ್ರಾಸ್, ಹಂಗೇರಿಯಾ ಸ್ವಯಂಸೇವಕರ ನೆರವು:
ಯುದ್ದ ಘೋಷಣೆಯಾಗುತ್ತಿದ್ದಂತೆ ನಮ್ಮಲ್ಲಿ ಭಯ ಆವರಿಸಿತು. ಬಂಕರ್‌ನಲ್ಲಿ ಆಶ್ರಯ ಪಡೆದಿದ್ದೆವು, ಆಗಾಗ್ಗೆ ನಮಗೆ ಟೆಲಿಗ್ರಾಂ ಮೆಸೇಜ್ ಬರುತ್ತಿತ್ತು, ಸೈರನ್ ಕೇಳಿದಾಗ ಹೊರಬಂದು ಮತ್ತೆ ಬಂಕರ್ ಸೇರಬೇಕಿತ್ತು. ಬಾಂಬ್ ಶಬ್ದ ಕೇಳಿ ಹೆದರಿಕೊಂಡಿದ್ದೆವು. ಫೆ.27ರಂದು ಪಕ್ಕದ ಏರ್‌ಪೋರ್ಟ್ನಿಂದ ಹೊರಡಲು ಅನುಮತಿ ಸಿಕ್ಕಿತಾದರೂ ಅಂದೇ ಏರ್‌ಪೋರ್ಟ್ಗೆ ಬಾಂಬ್ ಹಾಕಿ ನಾಶಪಡಿಸಿದ್ದರಿಂದ ಬರುವ ಆಸೆಯೂ ಕಮರಿತು. ಕೊನೆಗೆ ಫೆ.28ರಂದು ಭಾರತ ರಾಯಬಾರ ಕಚೇರಿಯು ವ್ಯವಸ್ಥೆ ಮಾಡಿದ್ದ 8 ಬೋಗಿಯ ರೈಲಲ್ಲಿ 1500 ಮಂದಿ ಕುರಿಗಳಂತೆ 33 ಗಂಟೆಗಳ ಕಾಲ ಮೂರು ರೈಲನ್ನು ಬದಲಿಸಿ ಪಯಣಿಸಿ, ಹಂಗೇರಿ ಗಡಿ ತಲುಪಿದೆವು. ಹೋದ ಜೀವ ಬಂದಂತಾಯಿತು. ಗಡಿಯಲ್ಲಿ ರೆಡ್‌ಕ್ರಾಸ್ ಘಟಕ, ಹಂಗೇರಿಯ ಸ್ವಯಂಸೇವಕರು ನಮ್ಮನ್ನು ಪ್ರೀತಿಯಿಂದ ಉಪಚರಿಸಿದರು. ಒಂದು ದಿನ ಇದ್ದ ನಾವು ಭಾರತೀಯ ರಕ್ಷಣಾ ಇಲಾಖೆಯ ವಿಮಾನದಲ್ಲಿ ದೆಹಲಿಗೆ ಬಂದಿಳಿದೆವು. ಅಲ್ಲಿಂದ ಬೆಂಗಳೂರು, ಹುಣಸೂರಿಗೆ ಹೀಗೆ ಎಲ್ಲವೂ ಉಚಿತವಾಗಿ ಊರು ತಲುಪಿದೆ ಎಂದು ಅನುಭವ ಹಂಚಿಕೊಂಡರು.

ಅಪ್ಪ-ಅಮ್ಮನ ಅಪ್ಪುಗೆ:
ಬೆಳಗಿನ ಜಾವ 4.30ಕ್ಕೆ ಹುಣಸೂರಿನ ಮನೆಗೆ ಬಂದು ಅಮ್ಮಾ ಎಂದು ಕರೆಯುತ್ತಿದ್ದಂತೆ ನಿದ್ದೆಯ ಮಂಪರಿನಲ್ಲಿದ್ದ ಅಪ್ಪ-ಅಮ್ಮ ಕಂಡು ಅಪ್ಪಿಕೊಂಡು ಸಂತೈಸಿದರು. ಅಲ್ಲದೆ ಶಾಸಕ ಎಚ್.ಪಿ.ಮಂಜುನಾಥರು ಸೇರಿದಂತೆ ಅನೇಕ ಬಂಧುಗಳು, ಸ್ನೇಹಿತರು ಮನೆಗೆ ಬಂದು ಸಂತೈಸಿ, ಹರ್ಷ ವ್ಯಕ್ತಪಡಿಸಿದರು. ಉಕ್ರೇನಿನಿಂದ ನಮ್ಮವರು ದೇಶಕ್ಕೆ ಬರಲು ಸರಕಾರ ಹಾಗೂ ರಾಯಭಾರಿ ಕಚೇರಿಯ ನೆರವನ್ನು ಸ್ಮರಿಸಿ. ಅಭಿನಂದನೆ ಸಲ್ಲಿಸಿದರು.

ಸರಕಾರ ನೆರವಿಗೆ ನಿಲ್ಲಲಿ:
ಸಾಲ-ಸೋಲ ಮಾಡಿ ಮಗನನ್ನು ವಿದೇಶಕ್ಕೆ ಕಳುಹಿಸಿದ್ದೊ, ಬಡ ಕುಟುಂಬದ ಮಗ ಡಾಕ್ಟರಾಗುತ್ತಾನೆಂಬ ಕನಸು ಕಂಡಿದ್ದೆವು. ಆದರೆ ಇದೀಗ ದುಗುಡವಾಗುತ್ತಿದೆ. ಮತ್ತೆ ಉಕ್ರೇನ್‌ಗೆ ಮಗನನ್ನು ಕಳುಹಿಸುವುದು ಕಷ್ಟ ಎಂಬಂತಾಗಿದೆ. ಸರಕಾರ ದೊಡ್ಡ ಮನಸ್ಸು ಮಾಡಿ ಇಲ್ಲಿಯೇ ವಿದ್ಯಾಬ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಬೇಕೆಂದು ತಂದೆ ಕಪನಯ್ಯ-ತಾಯಿ ಪ್ರೇಮಾ ಮನವಿ ಮಾಡಿದ್ದಾರೆ. ಇನ್ನು ಶಾಸಕರಾದ ಮಂಜುನಾಥ್‌ರ ಅಭಯ, ಸಹಕಾರ ಮರೆಯಂಗಿಲ್ಲವೆಂದರು.

Advertisement

Udayavani is now on Telegram. Click here to join our channel and stay updated with the latest news.

Next