ಹುಣಸೂರು; ಹುಣಸೂರು ನಗರಸಭೆ ಕಚೇರಿಗೆ ಸಂಬಂಧಿಸಿದ ಸಿ.ಸಿ.ಕ್ಯಾಮರಾ ಫೂಟೇಜ್ ನೀಡುವಲ್ಲಿ ಹಾಗೂ ಮಾಹಿತಿ ಆಯೋಗದ ಸೂಚನೆಯನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಚಂದ್ರು ಅವರಿಗೆ ಆಯೋಗವು 25 ಸಾವಿರ ರೂ ದಂಡ ವಿಧಿಸಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಹುಣಸೂರು ಮುಸ್ಲಿಂ ಬ್ಲಾಕ್‌ನ ಜೆ.ಬಿ.ಒಬೇದುಲ್ಲಾ 2022 ಫೆ. 3ರಂದು ಸಿ.ಸಿ.ಕ್ಯಾಮರಾ ಫೂಟೇಜ್ ನೀಡುವಂತೆ ಮಾಹಿತಿ ಹಕ್ಕಿನಡಿ ಕೋರಿದ್ದರು. ನಿಗದಿತ ಶುಲ್ಕ ಪಾವತಿಸಿದಲ್ಲಿ ಫೂಟೇಜ್ ನೀಡಲಾಗುವುದೆಂದು ಅರ್ಜಿದಾರರಿಗೆ ಸೂಚಿಸಿದ್ದಂತೆ ಒಬೇದುಲ್ಲಾ ನಿಗದಿತ ಶುಲ್ಕ ಪಾವತಿಸಿದ್ದರು. ಆದರೆ ಸಿ.ಸಿ.ಟಿ.ವಿಯ ಫೂಟೇಜ್ ಬ್ಯಾಕ್ ಅಪ್ ಶೇಖರಣೆಯಾಗಿಲ್ಲವೆಂದು 2022 ಅ. 21 ರಂದು ಹಿಂಬರಹ ನೀಡಿದ್ದಾರೆಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಆಯೋಗದ ನಿಯಮದಡಿ 30 ದಿನದೊಳಗೆ ಮಾಹಿತಿ ನೀಡಬೇಕಿತ್ತಾದರೂ 300 ದಿನಗಳಾದರೂ ಅರ್ಜಿದಾರರಿಗೆ ಮಾಹಿತಿ ನೀಡದೆ, ಅನಪೇಕ್ಷಿತ ಹಿಂಬರಹ ನೀಡುವ ಮೂಲಕ ವಿಳಂಬ ದೋರಣೆಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸಾರ್ವಜನಿಕ ಮಾಹಿತಿ ಅಧಿಕಾರಿ ಚಂದ್ರುರಿಗೆ 25 ಸಾವಿರ ರೂ ದಂಡ ವಿಧಿಸಿರುವ ಕರ್ನಾಟಕ ಮಾಹಿತಿ ಆಯೋಗವು ಏಕ ಕಂತಿನಲ್ಲಿ ದಂಡವನ್ನು ಪಾವತಿಸಲು ಹಾಗೂ ಪೂಟೇಜ್ ನೀಡಲು ಪಡೆದಿದ್ದ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ವಾಪಾಸ್ ನೀಡಿ, ಆಯೋಗಕ್ಕೆ ವರದಿ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್‌ರವರು ಆದೇಶಿಸಿದ್ದಾರೆ.
ಇದೇನು ಹೊಸತಲ್ಲ:
ಇದೇ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಐ.ಸಿದ್ದರಾಜು, ದ್ವಿತೀಯ ದರ್ಜೆ ಸಹಾಯಕಿ ಅನಿತಾರಿಗೂ ಈ ಹಿಂದೆ ಆಯೋಗ ದಂಡ ವಿಧಿಸಿದ್ದರೂ ಎಚ್ಚೆತ್ತುಕೊಳ್ಳದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚಾ ಗ್ರಾಸವಾಗಿದೆ.
ಇದನ್ನೂ ಓದಿ: 1 ನೇ ತರಗತಿಗೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿ 6 ವರ್ಷ ಎಂದು ನಿಗದಿ