ಹುಣಸೂರು : ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಹುಣಸೂರು ನಗರದಲ್ಲಿ ಕಾರ್ಯಾಚರಣೆಗಿಳಿದು ಮಾಸ್ಕ್ ಧರಿಸದ 200 ಪ್ರಕರಣದಲ್ಲಿ 20 ಸಾವಿರ ರೂ ದಂಡ ವಸೂಲಿ ಮಾಡಿದೆ.
ಬೆಳಗ್ಗೆಯಿಂದಲೇ ನಗರದ ವಿವಿಧ ಜನ ನಿಭಿಡ ಪ್ರದೇಶಗಳಲ್ಲಿ ತಹಸೀಲ್ದಾರ್ ಡಾ.ಅಶೋಕ್, ಡಿವೈಎಸ್‌ಪಿ ರವಿಪ್ರಸಾದ್, ಪೌರಾಯುಕ್ತ ರಮೇಶ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಗಳು, ಪೊಲೀಸರು ಬಸ್ ನಿಲ್ದಾಣ, ಕಲ್ಪತರು ವೃತ್ತ, ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆ, ಎಸ್.ಜೆ.ರಸ್ತೆ, ಹಳೇ ಬಸ್ ನಿಲ್ದಾಣದ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ, ಮೈಕ್ ಮೂಲಕ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ಮಾಸ್ಕ್ ಧರಿಸದ ಅಂಗಡಿಗಳವರು, ವಾಹನ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್‌ಗಳಾದ ರವಿ, ಚಿಕ್ಕಸ್ವಾಮಿ, ನಗರಸಭೆ ಆರೋಗ್ಯ ನಿರೀಕ್ಷಕರಾದ ಮೋಹನ್, ಸತೀಶ್ ಹಾಗೂ ಸಿಬ್ಬಂದಿಗಳು ಇದ್ದರು.
ನಿತ್ಯವೂ ಕಾರ್ಯಾಚರಣೆ ನಡೆಸಲಾಗುವುದು, ಸಾರ್ವಜನಿಕರು, ವಾಹನ ಸವಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದೆಂದು ಡಿವೈಎಸ್‌ಪಿ ರವಿಪ್ರಸಾದ್ ಹಾಗೂ ತಹಸೀಲ್ದಾರ್ ಡಾ.ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್‌ಗೆ ಉಗಿತಾ ಇದ್ದಾರೆ : ಜ್ಞಾನೇಂದ್ರ