Advertisement

Hunasur: ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನಿಸುವೆ: ಕೇಂದ್ರ ಸಚಿವ ಎಚ್‌ಡಿಕೆ

09:18 PM Dec 01, 2024 | Team Udayavani |

ಹುಣಸೂರು: ತಂಬಾಕಿಗೆ ಉತ್ತಮದ ದರ ಮತ್ತು ತಂಬಾಕು ಬೆಳೆಗಾರರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಭಾನುವಾರ ಬೆಂಗಳೂರಿನ ಎಚ್‌ಡಿಕೆ ನಿವಾಸದಲ್ಲಿ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ವಾಣಿಜ್ಯ ಬೆಳೆ ತಂಬಾಕು ಬೆಳೆವ ತಾಲೂಕುಗಳಾದ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ಅರಕಲಗೂಡು ತಾಲೂಕಿನ ರಾಮನಾಥಪುರ 100ಕ್ಕೂ ಹೆಚ್ಚು ರೈತ ಮುಖಂಡರ ನಿಯೋಗ ಕುಮಾರಸ್ವಾಮಿಯವರಿಗೆ ತಂಬಾಕು ಬೆಳೆಗಾರರ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು.

ಮನವಿ ಸ್ವೀಕರಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ ಮೈಸೂರು ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ. ಇದೀಗ ತಂಬಾಕು ಗುಣಮಟ್ಟದಲ್ಲಿನ ಕೊರತೆ ಇನ್ನಿತರ ಕಾರಣ ನೀಡಿ ಸೂಕ್ತ ದರ ನೀಡುತ್ತಿಲ್ಲವೆನ್ನುವ ಮಾಹಿತಿಯ ಶಾಸಕ ಹರೀಶ್‌ಗೌಡ ನೀಡಿದ್ದಾರೆ. ರೈತರ ನಿಯೋಗವನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ರನ್ನು ಭೇಟಿ ಮಾಡಿಸುವೆ. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗುವೆ, ಹಿಂದೆಯೂ ತಂಬಾಕು ಬೆಲೆ ಕುಸಿದಾಗ ಎಚ್.ಡಿ.ದೇವೇಗೌಡರು ರೈತರ ನೆರವಿಗೆ ನಿಂತಿದ್ದಾರೆಂದು ಸಚಿವರು ಸ್ಮರಿಸಿದರು.

ಅಧಿಕಾರಿಗಳು ರೈತರ ನೆರವಿಗೆ ಬರಲಿ:
ಕೇಂದ್ರ ಸಚಿವ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಮಸ್ಯೆಯ ಸಂಪೂರ್ಣ ಮಾಹಿತಿ ನೀಡಿದ್ದೇನೆ. ರೈತರ ಬವಣೆ ಕುರಿತು ತಿಳಿಸಿದ್ದೇನೆ. ಸಚಿವರ ಮಾರ್ಗದರ್ಶನದಂತೆ ದೆಹಲಿಗೆ ತೆರಳಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡುವ ವಿಶ್ವಾಸ ನನಗಿದೆ. ಖರೀದಿ ಕಂಪನಿಗಳು ಮತ್ತು ತಂಬಾಕು ಮಂಡಳಿ ಅಧಿಕಾರಿಗಳ ಸಭೆ ಆಯೋಜನೆಗೂ ಸಚಿವ ಕುಮಾರಸ್ವಾಮಿ ಒಪ್ಪಿದ್ದಾರೆ. ಖರೀದಿ ಕಂಪನಿಗಳು ಮತ್ತು ಅಧಿಕಾರಿವರ್ಗ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಶಾಸಕ ಹರೀಶ್ ಗೌಡ ಬೇಸರಿಸಿದರು.

ಹೋರಾಟಕ್ಕೂ ಸೈ:
ಅಧಿಕಾರಿಗಳು ರೈತಪರ ನಿಲುವನ್ನೇ ಹೊಂದಿರಬೇಕು, ಇಲ್ಲವೇ ರೈತರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.

Advertisement

ದೆಹಲಿಗೆ ನಿಯೋಗ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರ ನಿರ್ದೇಶನದಂತೆ ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದ ರೈತ ಮುಖಂಡರ ನಿಯೋಗ ಡಿ.2ರಂದು ಸೋಮವಾರ ದೆಹಲಿಗೆ ತೆರಳಲಿದ್ದು, ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಈ ವೇಳೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಇದ್ದರು. ನಿಯೋಗದಲ್ಲಿ ಪಿರಿಯಾಪಟ್ಟಣ ಮಾಜಿ ಶಾಸಕ ಕೆ.ಮಹದೇವ್, ಜೆಡಿಎಸ್ ಮುಖಂಡ ಹರವೆ ಶ್ರೀಧರ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ರೈತ ಮುಖಂಡರಾದ ತಟ್ಟೆಕೆರೆ ಶ್ರೀನಿವಾಸ್, ನಿಲುವಾಗಿಲು ಪ್ರಭಾಕರ್, ಅಗ್ರಹಾರ ನಂಜುಂಡೇಗೌಡ, ಉಂಡುವಾಡಿ ಚಂದ್ರೇಗೌಡ, ಸುರೇಶ್ ಅಶೋಕ್, ಬೆಟ್ಟೇಗೌಡ, ಶ್ರೀಧರ್, ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next