ಹುಣಸೂರು: ನಿದ್ದೆ ಮಂಪರಿಗೆ ಜಾರಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿ ಒಬ್ಬರು ಮೃತಪಟ್ಟು, 8 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಶುಂಠಿಕೊಪ್ಪ ಬಳಿ ನಡೆದಿದೆ.
ಹುಣಸೂರು ನಗರದ ಒಂಟೆಪಾಳ್ಯಬೋರೆ ನಿವಾಸಿ ಚಂದನ್ (26) ಮೃತಪಟ್ಟ ವ್ಯಕ್ತಿ. ಈತನ ಸಹೋದರ ಚೇತನ್ ಸೇರಿ 8 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಸ್ನೇಹಿತರು ಪಿಕಪ್ ವಾಹನದಲ್ಲಿ ಮಡಿಕೇರಿಯ ದಸರಾ ವೀಕ್ಷಿಸಿ ವಾಪಸ್ ಬರುತ್ತಿದ್ದ ವೇಳೆ ಶುಂಠಿಕೊಪ್ಪ ಬಳಿಯಲ್ಲಿ ನಿದ್ದೆ ಮಂಪರಿಗೆ ಜಾರಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬೊಲೆರೋ ವಾಹನ ಪಲ್ಟಿಯಾಗಿ ಚಂದನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಹನದಲ್ಲಿದ್ದು ತೀವ್ರ ಗಾಯಗೊಂಡವರ ಸ್ಥಳೀಯರು ಹೊರಕ್ಕೆ ತೆಗೆದು ಶುಂಠಿಕೊಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಚಂದನ್ ಶವವನ್ನು ಮರಣೋತ್ತರ ಪರೀಕ್ಷೆ ನಂತರ ಹುಣಸೂರಿನ ರುದ್ರಭೂಮಿಯಲ್ಲಿ ಸೋಮವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗಾಯಾಳುಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು.