ಹುಣಸಗಿ: ಬೇಸಿಗೆ ಧಗೆ ಹೆಚ್ಚಾದಂತೆ ಪ್ರಖರ ಬಿಸಿಲಿನ ತಾಪಕ್ಕೆ ಹನಿ ನೀರಿಗೂ ಜನ-ಜಾನುವಾರುಗಳು ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ಖಾಲಿ ಕೊಡ ಹಿಡಿದು ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗೆ ತಾಲೂಕಿನ ಕನ್ನಗಂಡನಹಳ್ಳಿ ಗ್ರಾಮ ಒಂದು ಉತ್ತಮ ನಿದರ್ಶನ. ಕನಗಂಡನಹಳ್ಳಿ ಗ್ರಾಮದಲ್ಲಿ ಎರಡು ಕೊಳವೆ ಬಾವಿ ಇದ್ದರೂ ನೀರಿನ ಸಮಸ್ಯೆ ನೀಗಿಲ್ಲ. ಪ್ರತಿ ನಿತ್ಯ ನೀರಿಗಾಗಿ ಹಾತೊರೆಯಬೇಕಿದೆ. ಹಗಲು-ರಾತ್ರಿ ಸರದಿ ಸಾಲಿನಲ್ಲಿ ಬಂಡಿ ಹಿಡಿದುಕೊಂಡು ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ.
ಹೆಚ್ಚಿದ ಸಮಸ್ಯೆ: ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆಬಾವಿಯಲ್ಲಿ ಸಮರ್ಪಕ ನೀರು ದೊರಕುತ್ತಿಲ್ಲ. ಸದ್ಯ ಅನಿವಾರ್ಯತೆಯಿಂದ ಅದೇ ಕೊಳವೆ ಬಾವಿಯಿಂದ ಜನರು ಹನಿ ನೀರನ್ನೂ ಕೂಡ ಹಿಡಿದಿಟ್ಟುಕೊಂಡು ದಾಹ ತೀರಿಸಿಕೊಳ್ಳುವ ಪರಿಸ್ಥಿತಿ ಇದೆ. ಈ ಸಮಸ್ಯೆ ಅನೇಕ ವರ್ಷಗಳಿಂದಲೂ ಇದ್ದರೂ ಸಂಬಂಧಿ ಸಿದ ಅಧಿಕಾರಿಗಳು ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.
ಎರಡೇ ಕೊಳವೆಬಾವಿ: 1200 ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಈ ಜನಸಂಖ್ಯೆಗೆ ಎರಡೇ ಕೊಳವೆ ಬಾವಿ ಮಾತ್ರ ದಾಹ ನೀಗಿಸುತ್ತಿವೆ. ಹೀಗಾಗಿ ಅವಶ್ಯಕತೆಗೆ ತಕ್ಕಂತೆ ನೀರು ಸಿಗುತ್ತಿಲ್ಲ. ಆದಗ್ಯೂ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಟ್ಯಾಂಕರ್-ನೀರಿನ ಸಂಗ್ರಹಾಗಾರ ಅಳವಡಿಸಿ: ಕುಡಿಯುವ ನೀರಿಗಾಗಿ ಸರಕಾರಗಳು ಅನೇಕ ಅನುದಾನ ಭರಿಸಿದರೂ ಇಲ್ಲಿ ಮಾತ್ರ ಜನರಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಟ್ಯಾಂಕರ್ ಅಥವಾ ನೀರಿನ ಸಂಗ್ರಹಾಗಾರ ಅಳವಡಿಸಿ ಪೈಪ್‌ಲೈನ್ ಮೂಲಕ ನೀರು ಸಂಗ್ರಹಿಸಿದರೆ ಮಾತ್ರ ನೀರಿನ ಸಮಸ್ಯೆ ಪರಿಹರಿಸಬಹುದೆಂದು ಜನರ ಅಭಿಪ್ರಾಯ.
ಸಮಸ್ಯೆಯಿಂದ ಜನರು ಇಷ್ಟೆಲ್ಲ ಇಕ್ಕಟ್ಟಿಗೆ ಸಿಲುಕಿದ್ದರೂ ಮಾತ್ರ ಯೊವೊಬ್ಬ ಅಧಿಕಾರಿಗಳು, ಸರ್ಕಾರ ಈ ಬಗ್ಗೆ ಚಿಂತಿಸುತ್ತಿಲ್ಲ. ಆದ್ದರಿಂದ ಗ್ರಾಮಸ್ಥರ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬುದು ಎಂಬುದು ಸಾರ್ವಜನಿಕರ ಒತ್ತಾಯ.
ಎಷ್ಟೇ ಕೊಳವೆಬಾವಿ ಹಾಕಿಸಿದರೂ ಅಂತರ್ಜಲ ಕೊರತೆಯಿಂದ ನೀರು ಬರುತ್ತಿಲ್ಲ. ಈಗಾಗಲೇ ಗ್ರಾಮದಲ್ಲಿ ಬಾವಿ ಇದೆ. ಅದರಲ್ಲಿ ನೀರು ಬತ್ತಿದೆ. ಸಮಸ್ಯೆ ಹೋಗಲಾಡಿಸಲು ಅಲ್ಲಿನ ಜನರಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು.
.
ಸಿದ್ರಾಮಪ್ಪ ಪಾಟೀಲ,
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಾಮನಟಗಿ
ನೀರೇ ಸಾಲುತ್ತಿಲ್ಲ. ಮನೆಯಲ್ಲಿ ಜನ-ಜಾನುವಾರುಗಳಿಗೂ ನೀರು ಬೇಕು. ಹಗಲು-ರಾತ್ರಿ ಎನ್ನದೇ ನೀರಿಗಾಗಿ ಅಲೆದಾಡಬೇಕಾದ ಅನಿವಾರ್ಯತೆ ಇದೆ. ನಮ್ ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳಬೇಕು. ಸಂಬಂಧಿ ಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಬೇಕು.
.
ಭೀಮಾಬಾಯಿ, ಸ್ಥಳೀಯರು
ಬಾಲಪ್ಪ ಎಂ. ಕುಪ್ಪಿ