ಹುಣಸಗಿ: ಡಾ| ಸಿ.ಎಸ್. ದ್ವಾರಕನಾಥ ಆಯೋಗದ ವರದಿಯನ್ನು ಶೀಘ್ರದಲ್ಲಿ ಜಾರಿಗೆ ತಂದಲ್ಲಿ ಮಾತ್ರ ಹಿಂದುಳಿದ ವರ್ಗಗಳ ಜನರು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ ಎಂದು ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಅಹ್ಮದ ಪಠಾಣ ಹೇಳಿದರು.
ಪಟ್ಟಣದಲ್ಲಿ ಪಿಂಜಾರ ಸಂಘ ಹಾಗೂ ಸಾಮೂಹಿಕ ಸಂಘಟನೆಯಿಂದ ತಹಶೀಲ್ದಾರ್ ಕಚೇರಿ ಎದುರು ಪಿಂಜಾರ ಸಂಘದವರು ಡಾ| ಸಿ.ಎಸ್. ದ್ವಾರಕನಾಥ ಆಯೋಗದ ವರದಿಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಅವರು ಪ್ರತಿಭಟನೆ ನಡೆಸಿದರು.
ಪಿಂಜಾರ ಸಮುದಾಯದ ಶೇ. 80ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದು, ಪಿಂಜಾರ ಸಮುದಾಯದ ಜನರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು. ಆರ್ಥಿಕವಾಗಿ ಹಿಂದುಳಿದ ಪಿಂಜಾರ ಸಮಾಜದ ಮಕ್ಕಳಿಗೆ ಶಿಕ್ಷಣ ಸೇರಿದಂತೆ ವಿವಿಧ ಅನುಕೂಲತೆ ಕಲ್ಪಿಸುವಂತೆ ಆಗ್ರಹಿಸಿದರು.
ಸಂಘದ ಹುಣಸಗಿ ತಾಲೂಕು ಅಧ್ಯಕ್ಷ ಬಂದಗಿಸಾಬ ಅಗ್ನಿ ಹಾಗೂ ಪ್ರಧಾನ ಕಾರ್ಯದರ್ಶಿ ಸೋಫಿಸಾಬ್ ಡಿ. ನದಾಫ್ ಮಾತನಾಡಿ, ಪಿಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ ಒದಗಿಸುವುದು ಹಾಗೂ ವಸತಿ ನಿಲಯಗಳಲ್ಲಿ ಹೆಚ್ಚಿನ ಸ್ಥಾನ ಕಲ್ಪಿಸುವಂತೆ ಒತ್ತಾಯಿಸಿದರು.
ಹುಣಸಗಿ ತಹಶೀಲ್ದಾರ್ ಸುರೇಶ ಚವಲರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ಅಧ್ಯಕ್ಷ ವೀರಣ್ಣ ಅಗ್ನಿ, ಶಿವು ಮಾಳನೂರ್, ರೈತ ಸಂಘದ ಅಧ್ಯಕ್ಷ ರುದ್ರಣ್ಣ ಮೇಟಿ, ಪಿಂಜಾರ ಸೇವಾ ಸಂಘದ ಅಬ್ದುಲ್ ಸಾಬ್ ಬೇವಿನಾಳ್, ಹುಸೇನಸಾಬ್ ಎಂ. ಗಾದಿ, ಕಾಸೀಂಸಾಬ್ ಎಸ್, ಕಕ್ಕಲದೊಡ್ಡಿ, ಉಸ್ಮಾನ ಬಿ. ನದಾಫ್, ರಾಜೇಸಾಬ್ ನದಾಫ್, ಹುಸೇನಸಾಬ್, ಖಾದರಸಾಬ್ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಇದ್ದರು.