ಹುಣಸಗಿ: ಕೊರೊನಾ ವೈರಸ್‌ಗೆ ನಿಯಂತ್ರಣಕ್ಕೆ ಮನೆಯಿಂದ ಹೊರಗೆ ಬಾರದೆ ಮುಂಜಾಗ್ರತೆ ಪಾಲಿಸುವುದೇ ದೊಡ್ಡ ಔಷಧಿಯಾಗಿದೆ ಎಂದು ಪಿಎಸ್‌ಐ ಜನಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತೆಗಾಗಿ ಮಂಗಳವಾರ ನಡೆದ ಬೀದಿ ಬದಿ ವ್ಯಾಪಾರಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡುವಾಗ ವ್ಯಾಪಾರಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುತ್ತಮುತ್ತ ಸ್ವಚ್ಛತೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ತಳ್ಳು ಬಂಡಿ ವ್ಯಾಪಾರಸ್ಥರು ಹಾಗೂ ಇತರೆ ವ್ಯಾಪರಸ್ಥರು 200 ಮೀಟರ್ ಅಂತರ ದೂರ ಇದ್ದು ವ್ಯಾಪಾರ ಮಾಡಬೇಕು. ಸೆಕ್ಷನ್ 144 ಜಾರಿಯಾಗಿದ್ದು, ಸಾರ್ವಜನಿಕರು ಹೊರಗೆ ಬಾರದೇ ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಅವಶ್ಯ ಇದ್ದಾಗ ಮೇಲಾಧಿ ಕಾರಿಗಳ ಆದೇಶದಂತೆ ಮನೆ ಮನೆಗೆ ಸುರಕ್ಷತೆಯಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ ವಿನಯಕುಮಾರ ಪಾಟೀಲ ಮಾತನಾಡಿ, ಈಗಾಗಲೇ ಕೊರೊನಾ ವೈರಸ್ ವ್ಯಾಪಾಕವಾಗಿದೆ. ಆದಷ್ಟು ಸುರಕ್ಷತೆಯೊಂದಿಗೆ ವ್ಯಾಪಾರಕ್ಕೆ ಅಣಿಯಾಗಬೇಕು. ಸ್ವಚ್ಛತೆ ಕಾಪಾಡಬೇಕು. ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದರು.
ಗ್ರೇಡ್-2 ತಹಶೀಲ್ದಾರ್ ಸುರೇಶ ಚವಲ್ಕರ್, ಹಣಮರೆಡ್ಡಿ, ಬಸವರಾಜ ಬಿರಾದಾರ, ಸಂತೋಷ ಕುಲಕರ್ಣಿ, ಗುರುಲಿಂಗಯ್ಯ ಹಿರೇಮಠ ಇದ್ದರು.