Advertisement

ಕಾನೂನು ತಿಳಿವಳಿಕೆ ಎಲ್ಲರಿಗೂ ಅವಶ್ಯ

05:00 PM Feb 03, 2020 | Naveen |

ಹುಣಸಗಿ: ಎಲ್ಲರೂ ಕಾನೂನಿನ ಸಾಮಾನ್ಯ ಜ್ಞಾನ ಳಿದುಕೊಳ್ಳುವುದು ಅಗತ್ಯ. ಕಾನೂನು ತಿಳಿವಳಿಕೆಯಿಂದ ಅಪರಾಧಗಳು ಕಡಿಮೆಯಾಗುತ್ತವೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ತಯ್ನಾಬಾ ಸುಲ್ತಾನ್‌ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥ ಜಾಥಾ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಕಾನೂನು ತಿಳಿವಳಿಕೆ ಪ್ರತಿಯೊಬ್ಬರಿಗೂ ಅವಶ್ಯ. ಮಹಿಳಾ ದೌರ್ಜನ್ಯ, ಜನನ ಮರಣ ಮೋಟಾರು ವಾಹನ, ಬಾಲ್ಯ ವಿವಾಹ ತಡೆ ಮೊದಲಾದ ಕಾಯ್ದೆಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಕಾನೂನಿನ ಅರಿವು ಇದ್ದಾಗ ಕುಟುಂಬದಲ್ಲಿ, ಸುತ್ತಲಿನ ಪರಿಸರದಲ್ಲಿ ನಡೆಯುವ ಕಾಯ್ದೆಗಳ ಉಲ್ಲಂಘನೆಯನ್ನು ಪೊಲೀಸರಿಗೆ ಅಥವಾ ನ್ಯಾಯಾಲಕ್ಕೆ ಮಾಹಿತಿ ನೀಡುವ ಮೂಲಕ ತಡೆಯಬಹುದು.

ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಕಾನೂನು ಸೇವೆಗಳ ಸಮಿತಿಯಿಂದ ನಡೆಯುವ ಅರಿವು-ನೆರವು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಕಾನೂನಿನ ಜ್ಞಾನವಿಲ್ಲದೇ ಅನೇಕ ಅಪರಾಧಗಳು ನಡೆಯುತ್ತಿವೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ವಿದ್ಯಾವಂತನಾಗುವುದರ ಜತೆಗೆ ಕಾನೂನಿನ ಅರಿವು ಹೊಂದಿದಾಗ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಭಾರತದ ಸಂವಿಧಾನದಲ್ಲಿ ಕಾನೂನು ಬಲಿಷ್ಟವಾಗಿದೆ. ಆದರೆ ಇಚ್ಚಾಶಕ್ತಿ ಕೊರತೆಯಂದ ಯಾರು ಅದನ್ನು ಅರ್ಥೈಸಿಕೊಳ್ಳುತ್ತಿಲ್ಲ. ಇದರಿಂದ ಸಮಾಜದಲ್ಲಿ ಅನೇಕ ಅಪರಾಧಗಳು ನಡೆಯುತ್ತಿವೆ.ದೌರ್ಜನ್ಯಕ್ಕೆ ಬಲಿಯಾದವರಿಗೆ ಉಚಿತ ಕಾನೂನು ಸಲಹೆ ಹಾಗೂ ಸೇವೆ ಪಡೆದುಕೊಳ್ಳಲು ಅವಕಾಶವಿದೆ.

ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ನೀಡಿದೆ. ಅದನ್ನು ಸಮರ್ಪಕವಾಗಿ ಚಲಾಯಿಸಲು ಉತ್ತಮ ಜೀವನ ನಡೆಸಬೇಕು. ಇಂತಹ ಕಾನೂನು ಅರಿವು ಮತ್ತು ನೆರವಿನ ಸಹಕಾರ ಪಡೆಯುವುದು ಅವಶ್ಯವಾಗಿದೆ ಎಂದು ಹೇಳಿದರು.

Advertisement

ಕಾನೂನು ದೇಶದ ಪ್ರತಿಯೊಬ್ಬ ಪ್ರಜೆಗೆ ಅನ್ವಯವಾಗುತ್ತದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿದ ಭಾರತದ ಹೆಮ್ಮೆ ಎತ್ತಿಹಿಡಿಯಬೇಕಾಗಿದೆ ಎಂದು ಹೇಳಿದರು.

ಸುರಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹ್ಮದ್‌ ಹುಸೇನ್‌ ಮಾತನಾಡಿ, ಬಾಲ್ಯವಿವಾಹ, ಮಹಿಳಾ ದೌರ್ಜನ್ಯ, ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿ ಹೋಗಲಾಡಿಸಲು ಕಾನೂನಿನ ಅರಿವು ಅವಶ್ಯ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಧ್ಯೇಯೊದ್ದೇಶಗಳು ಮತ್ತು ಜನ ಸಾಮಾನ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರೇಡ್‌-2 ತಹಶೀಲ್ದಾರ್‌ ಸುರೇಶ ಚವಲ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ಜನಗೌಡ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಬಸವರಾಜ ಮಲಗಲದಿನ್ನಿ, ಯಲ್ಲಪ್ಪ ಹುಲಿಕಲ್‌ ವಕೀಲರು, ಹಣಮಂತ ಕಟ್ಟಿಮನಿ ವಕೀಲರು, ಸಂತೋಷ ಗಾರಂಪಳ್ಳಿ, ಪಿಡಿಒ ರಾಜಶೇಖರ ನಾಯಕ, ಸುಭಾಷ ಬಿರಾದಾರ, ಸಾರ್ವಜನಿಕರು ಇದ್ದರು. ಬಸವರಾಜ ಬಿರಾದಾರ ಸ್ವಾಗತಿಸಿದರು. ಮಲ್ಲಣ್ಣ ಭೋವಿ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next