ಹುಣಸಗಿ: ನಾಡಿನ ಕಲೆ-ಸಂಸ್ಕೃತಿ-ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಶ್ರಮಿಸುತ್ತಿದ್ದು, ಇವುಗಳನ್ನು ಉಳಿಸಿ-ಬೆಳೆಸುವಲ್ಲಿ ಸಮುದಾಯದ ಸಹಕಾರ ಅಗತ್ಯ ಎಂದು ಯಾದಗಿರಿ ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಹೇಳಿದರು.
ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ನಡೆದ ಸುಗ್ಗಿ ಹುಗ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನನಿತ್ಯ ಬದುಕಿನಲ್ಲಿ ಜಾನಪದ ಸಾಹಿತ್ಯ ಹಾಸುಹೊಕ್ಕಾಗಿದ್ದು, ಜಾನಪದ ಸಾಹಿತ್ಯ ಉಳಿಸಿ- ಬೆಳೆಸುವುದು ಎಲ್ಲರ ಕರ್ತವ್ಯ ಎಂದರು.
ಯುವ ಮುಖಂಡ ಬಬ್ಲು ಗೌಡ ಮಾತನಾಡಿ, ಬದಲಾದ ಕಾಲಮಾನ ಮತ್ತು ಜೀವನ ಶೈಲಿಯಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಹಿಂದೆ ನಮ್ಮ ಪೂರ್ವಜರು ಕೃಷಿ ಚಟುವಟಿಕೆಯೊಂದಿಗೆ ಜಾನುವಾರು ಸಾಕುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂದು ಅವೆಲ್ಲ ಕಣ್ಮರೆಯಾಗಿ ಯಾಂತ್ರಿಕ ಬದುಕು ಸಾಗಿಸುತ್ತಿದ್ದೇವೆ ಎಂದರು.
ತೊಟ್ಟಿಲು ಹಾಗೂ ಸೋಬಾನ ಹಾಡುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಕಾಲಕ್ರಮೇಣ ಎಲ್ಲವೂ ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ರವಿಕುಮಾರ ರಾಠೊಡ, ಗ್ರಾಪಂ ಉಪಾಧ್ಯಕ್ಷ ಮಲ್ಲನಗೌಡ ಹಂದ್ರಾಳ, ಸಿದ್ದಲಿಂಗಯ್ಯ ಹಿರೇಮಠ, ಸಿದ್ದನಗೌಡ ಕರಿಬಾವಿ, ಸಿದ್ದನಗೌಡ ಪೊಲೀಸ್ ಪಾಟೀಲ, ಬಾಪುಗೌಡ ಮಾಲಿಪಾಟೀಲ, ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ತಮಟೆ ವಾದನ, ಹಗಲು ವೇಷ, ವೀರಭದ್ರ ಕುಣಿತ ಜನಮನ ಸೆಳೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಿತು. ಶಿಕ್ಷಕ ಎಸ್.ಎಸ್. ಮಾರನಾಳ ನಿರೂಪಿಸಿ, ವಂದಿಸಿದರು.