Advertisement

ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿ

04:26 PM Jun 06, 2019 | Naveen |

ಹುಣಸಗಿ: ಇಲ್ಲಿನ ಗ್ರಾಪಂ ಸಾಮಾನ್ಯ ಸಭೆ ಅಧ್ಯಕ್ಷೆ ಶಾಂತಮ್ಮ ಬಸವರಾಜ ಮಲಗಲದಿನ್ನಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

Advertisement

ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಮೇವು ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆ ನಡೆದವು.

ಸದಸ್ಯ ಮಂಜುನಾಥ ದೇಸಾಯಿ ಮಾತನಾಡಿ, ಸರಕಾರದಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದು, ಹುಣಸಗಿ ತಾಲೂಕಿನ ಒಂದು ಶಾಲೆಯನ್ನು ಆಯ್ಕೆ ಮಾಡಿಲ್ಲ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಶಿಕ್ಷಣ ಇಲಾಖೆಗೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ಸದಸ್ಯ ಚಂದ್ರಶೇಖರ ಗೋನಾಳ ಮಾತನಾಡಿ, ತಾಳಿಕೋಟಿ ರಸ್ತೆಯಲ್ಲಿ ಬರುವ ವಾರ್ಡ್‌ ನಂ. 8ರ ಆಶ್ರಯ ಕಾಲೋನಿಯಲ್ಲಿ ಶೌಚಾಲಯ ಸಮಸ್ಯೆ ಇದ್ದು, ಅದನ್ನು ಕೂಡಲೇ ಅಭಿವೃದ್ಧಿ ಅಧಿಕಾರಿಗಳು ಪರಿಹರಿಸುವಂತೆ ಒತ್ತಾಯಿಸಿದರು.

ಗ್ರಾಮ ದೇವತೆ ದೇವಸ್ಥಾನ ಬಳಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ವಾರ್ಡ್‌ ನಿವಾಸಿಗಳು ತೊಂದರೆ ಪಡುತ್ತಿದ್ದು, ನೀರಿನ ಸೌಲಭ್ಯಕ್ಕಾಗಿ ಒತ್ತಾಯಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದ ಕಾಮಗಾರಿಯನ್ನು ಜಿಪಿಎಸ್‌ ಮಾಡಲು ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲಸ ಪ್ರಗತಿ ಸಾಧಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ಸದಸ್ಯ ಸಿದ್ದಣ್ಣ ಸಭೆಯ ಗಮನಕ್ಕೆ ತಂದರು.

Advertisement

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ಥಾವರಮಠ ಮಾತನಾಡಿ, ಎಲ್ಲ ಸದಸ್ಯರು ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ಪ್ರಯತ್ನಿಸೋಣ ಎಂದರು. ಡಾ| ಅನಂತಮೂರ್ತಿ ಮಾತನಾಡಿ, ಹುಣಸಗಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲಾಗಿದ್ದು, 2 ರೂ. ಕೆಜಿಯಂತೆ ಮೇವು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 19 ಟನ್‌ ಮೇವು ಸಂಗ್ರಹವಿದೆ ಎಂದು ಸಭೆಯ ಗಮನಕ್ಕೆ ತಂದರು. ಕಳೆದ 8 ತಿಂಗಳಿಂದಲೂ ನಮ್ಮ ಸಂಬಳವಾಗಿಲ್ಲ. ಆದ್ದರಿಂದ ಸಂಬಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ, ಅಭಿವೃದ್ಧಿ ಅಧಿಕಾರಿ ರಾಜಶೇಖರನಾಯಕ, ದತ್ತಾತ್ರೇಯ ಕುಲಕರ್ಣಿ, ಸದಸ್ಯರಾದ ಆನಂದಸ್ವಾಮಿ ಮಠ, ಅನಂತ ದೇಶಪಾಂಡೆ, ಅನೀಲ ಬಳಿ, ಬಸವರಾಜ ಹಂಚಲಿ, ನಾಗಯ್ಯಸ್ವಾಮಿ ದೇಸಾಯಿಗುರು, ನೀಲಕಂಠ ಚಿಂಚೊಳಿ, ಪರಶುರಾಮ ದ್ಯಾಪುರ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗ್ರಾಪಂ ಸದಸ್ಯ ಶಿವಶರಣ ದೇಸಾಯಿ, ಸಂಜೀವಪ್ಪ ಹಾಗೂ ಬಸಣ್ಣ ದೊರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next