ಹುಣಸಗಿ: ರೋಗಿಗಳ ಆರೋಗ್ಯ ಕಾಪಾಡುವ ವೈದ್ಯರು ದೇವರಿದ್ದಂತೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಹೇಳಿದರು.
ಪಟ್ಟಣದಲ್ಲಿ ಸ್ಥಳೀಯ ವೈದ್ಯರ ಸಂಘದಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿದೇಶಿ ಜೀವನದ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಆರೋಗ್ಯ ನಾವೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆದ್ದರಿಂದ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸುವ ಅಗತ್ಯ ಇದೆ ಎಂದರು.
ಆಶೀರ್ವಾದ ಗ್ಲೋಬಲ್ ಸಂಸ್ಥೆಯ ಅಧ್ಯಕ್ಷ ಡಾ| ವೀರಭದ್ರಗೌಡ ಹೊಸಮನಿ ಮಾತನಾಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಡಾ| ಬಿ.ಸಿ. ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಡಾ| ರಾಯ್ ಅವರು ಕೊಡುಗೆ ಅಪಾರವಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದರೂ ಕೂಡ ದಿನದ ಎರಡು ಗಂಟೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಮಹಿಳೆಯರಿಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸುವ ಮೂಲಕ ಮಹಿಳೆಯ ಸಮಸ್ಯೆಗೆ ಪರಿಹಾರ ಒದಗಿಸಲು ಶ್ರಮಿಸಿದ್ದರು ಎಂದು ಹೇಳಿದರು.
ಹುಣಸಗಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯದಂತಿರುವ ಹುಣಸಗಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಬಡವರ ಹಿತ ಕಾಪಾಡುವ ಗುಣ ಹೊಂದಿರಬೇಕು ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಾಗಣ್ಣ ದಂಡಿನ್, ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಸಂಗನಗೌಡ ಪಾಟೀಲ, ಸಂಗಣ್ಣ ವೈಲಿ, ತಾಪಂ ಸದಸ್ಯೆ ಪ್ರೀತಾಬಾಯಿ ಪವಾರ್, ವೀರೇಶ ಚಿಂಚೋಳಿ, ಪಿಎಸ್‌ಐ ನಚಿಕೇತ್ ಜನಗೌಡ, ವೈದ್ಯರ ಸಂಘದ ಅಧ್ಯಕ್ಷ ಡಾ| ವಿಲಾಸ್ ಆರ್. ಗುಂಡಾ, ಡಾ| ಎಂ.ಎಸ್. ಹುದ್ದಾರ, ಡಾ| ಜಿ.ಎಸ್. ಪಾಟೀಲ, ಡಾ| ಎಸ್.ಎಂ. ಹೈಯಾಳ, ಡಾ| ನಿಂಗರಡ್ಡಿ ಬಿರಾದಾರ, ಮೌನೇಶ ಹೂಗಾರ, ಬಸನಗೌಡ ಪಾಟೀಲ, ಡಾ| ಪ್ರಕಾಶ, ಡಾ| ಎಲ್.ಎಚ್. ನಾಲತ್ವಾಡ ಸೇರಿದಂತೆ ಇತರರು ಇದ್ದರು. ಪ್ರಕಾಶ ಎಂ.ಪಿ. ಸ್ವಾಗತಿಸಿದರು. ನಾಗನಗೌಡ ಪಾಟೀಲ ನಿರೂಪಿಸಿದರು. ವಿಜಯಕುಮಾರ ಕಲ್ಲದೇವನಹಳ್ಳಿ ವಂದಿಸಿದರು.