ಹುಣಸಗಿ: ದೀಪ ಜ್ಞಾನದ ಸಂಕೇತ. ನಮ್ಮಲ್ಲಿನ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕಿನ ಕಡೆ ಸಾಗೋಣ. ದೀಪ ಇನ್ನೊಬ್ಬರಿಗೆ ಬೆಳಕು ನೀಡುವಂತೆ ನೀವೂ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಬಾಳಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಕಡ್ಲೆಪ್ಪ ಮಠದ ಶ್ರೀ ಪ್ರಭುಲಿಂಗ ಸ್ವಾಮಿಗಳು ನುಡಿದರು.
ತಾಲೂಕಿನ ಬಲಶೇಟ್ಟಿಹಾಳ ಗ್ರಾಮದ ಬಸವಲಿಂಗ ವಿರಕ್ತ ಶ್ರೀ ಮಠದಲ್ಲಿ ನಡೆದ ಧರ್ಮಸಭೆ ಹಾಗೂ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಮಾನವ ಜನ್ಮ ದೊಡ್ಡದು. ಮಾನವನಾಗಿ ಜನಿಸಿದ ನಾವೆಲ್ಲರೂ ಸರಿ ಸಮಾನರು. ಶೋಷಿತರ ಏಳ್ಗೆಗೆ ಶ್ರಮಿಸಿ ನಿತ್ಯ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಶಹಾಪುರದ ಶ್ರೀ ಸೂಗುರೇಶ್ವರ ಸ್ವಾಮೀಜಿ ಮಾತನಾಡಿ, ಒಳ್ಳೆ ಎಣ್ಣೆ ಮತ್ತು ತುಪ್ಪದ ದೀಪ ಹಚ್ಚಿದರೆ ವಾತಾವರಣದಲ್ಲಿನ ಕಲ್ಮಶ ಕ್ರಿಮಿಕೀಟಗಳು ನಾಶವಾಗಿ ಉತ್ತಮ ಗಾಳಿ ಸೇವಿಸಬಹುದಾಗಿದೆ. ಆದ್ದರಿಂದ ನಮ್ಮ ಹಿರಿಯರು ದೇವರ ಮನೆಯಲ್ಲಿ ದೀಪ ಹಚ್ಚಿ ಭಕ್ತಿಭಾವದಿಂದ ನಡೆಯುತ್ತಿದ್ದರು ಎಂದು ಹೇಳಿದರು.
ಎರಡನೇ ವರ್ಷದ ಪೂರ್ಣಿಮೆ ದೀಪೋತ್ಸವವನ್ನು ಇಲ್ಲಿಯ ಭಕ್ತರು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸ ವಿಷಯವಾಗಿದೆ, ಪ್ರಕೃತಿ, ನೆಲ, ಜಲ, ವಾಯು, ನೆರೆಹೊರೆಯವರೊಂದಿಗೆ ನಮ್ಮ ಬದುಕು, ಸ್ವಭಾವ ತುಂಬಾ ಹಸನಾಗಿರಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಅಯ್ಯಣ್ಣ ಹಿರೇಮಠ, ಶ್ರೀಮಠ ನಡೆದು ಬಂದ ದಾರಿ ವಿವರಿಸಿದರು. ಬಲಶೇಟ್ಟಿಹಾಳ ಶ್ರೀಮಠದ ಸಿದ್ದಲಿಂಗ ಶಾಸ್ತ್ರಿಗಳು ಬಾಚಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಬ್ರಯ್ಯ ಸ್ವಾಮಿಗಳು, ಮಲ್ಲಯ್ಯ ಶಾಸ್ತ್ರಿಗಳು ಸೇರಿದಂತೆ ದ್ಯಾಮನಾಳ, ಕುಪ್ಪಿ ಸೇರಿ ಅಸಂಖ್ಯಾತ ಸದ್ಭಕ್ತರು ಭಾಗವಹಿಸಿದ್ದರು. ಬಸ್ಸಣ್ಣ ಗೊಡ್ರಿ ಸ್ವಾಗತಿಸಿದರು. ಬಸವರಾಜ ಅಂಗಡಿ ನಿರೂಪಿಸಿದರು. ವೀರಣ್ಣ ಬೆಳ್ಳುಬ್ಬಿ ವಂದಿಸಿದರು.