ಹುನಗುಂದ: ಇಲ್ಲಿಯ ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಪದೇ ಪದೇ ವಿಘ್ನ ಎದುರಾಗಿದ್ದು, ಆಡಳಿತಾಧಿಕಾರಿ ಮೂಲಕ ಆಡಳಿತದ ನಿರ್ವಹಣೆ ನಡೆಯುತ್ತಿದೆ. ಅಧಿಕಾರಕ್ಕಾಗಿ ಗೆದ್ದ ಸದಸ್ಯರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡರೂ ಸರ್ಕಾರ ನಿಗದಿಗೊಳಿಸಿದ ಮೀಸಲಾತಿಯನ್ನೇ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ಆಯ್ಕೆ ಪ್ರಕಿಯೆ ನಡೆಯದಿರಲು ಕಾರಣವಾಗಿದೆ.
ನ್ಯಾಯಾಲಯದ ತೀರ್ಪು: ಬಾಕಿ ಮಾ. 11ರಂದು ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಗೆ ಮೀಸಲಾತಿ ಹೊರಡಿಸುವ ಮೂಲಕ ಸ್ಥಳೀಯ ಸಂಸ್ಥೆಯ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರ ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಮತ್ತೇ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಬಾಗಿಲಿಗೆ ತಟ್ಟಿದ್ದರು. ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಂಡಿದ್ದರಿಂದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕಿಯೆ ನಡೆಯಲಿಲ್ಲ.
ಕಳೆದ ಎರಡು ವರ್ಷಗಳಿಂದ ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರವಿಲ್ಲದೇ ಆಡಳಿತಾಧಿಕಾರಿಗಳ ಕೈಯಲ್ಲಿ ಅಧಿಕಾರ ಇರುವುದರಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿವೆ. ಪುರಸಭೆ ಸದಸ್ಯರು ಹೆಸರಿಗೆ ಮಾತ್ರ ಸದಸ್ಯರಾಗಿದ್ದು, ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಸದ್ಯ ಸ್ವಲ್ಪ ಮಟ್ಟಿಗೆ ಸದಸ್ಯರಿಗೆ ಹಿನ್ನಡೆಯಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ವಾರ್ಡ್‌ಗಳಲ್ಲಿರುವ ಸಮಸ್ಯೆ ಆಧರಿಸಿ ಕೆಲಸ ಕಾರ್ಯ ಮಾಡಲಾಗುತ್ತಿದೆ.
– ಈರಣ್ಣ ಗುಡದಾರಿ, ಮುಖ್ಯಾಧಿಕಾರಿ, ಪುರಸಭೆ
ಪುರಸಭೆಯ ಆಡಳಿತಾಧಿ ಕಾರಿಗಳು ವಾರ್ಡ್ ಅಭಿವೃದ್ಧಿ ವಿಷಯದಲ್ಲಿ ಸದಸ್ಯರಂತೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.
– ಮಹೇಶ ಬೆಳ್ಳಿಹಾಳ, ಪುರಸಭೆ ಬಿಜೆಪಿ ಸದಸ್ಯ
– ಮಲ್ಲಿಕಾರ್ಜುನ ಬಂಡರಗಲ್ಲ