Advertisement

ಹುನಗುಂದಕ್ಕೆ  ಇನ್ನೂ  ಸಿದ್ದುನೇ ಸಿಎಂ!

09:49 AM Mar 07, 2019 | |

ಹುನಗುಂದ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದರೂ ಹುನಗುಂದ ಕ್ಷೇತ್ರಕ್ಕೆ ಮಾತ್ರ ಇನ್ನೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ.

Advertisement

ಹೌದು, ಇದು ಜನರ ಮನಸ್ಸಿನಲ್ಲಿ ಅಲ್ಲ. ಸಿದ್ದರಾಮಯ್ಯ ಅವರ ಆಪ್ತರು ಹೇಳಿಕೊಳ್ಳುವುದೂ ಅಲ್ಲ. ಸರ್ಕಾರದ ಅಧೀನದಲ್ಲಿರುವ ತಾಲೂಕು ಆಡಳಿತದ ಪಾಲಿಗೆ ರಾಜ್ಯದ ಮುಖ್ಯಮಂತ್ರಿ ಇನ್ನೂ ಸಿದ್ದರಾಮಯ್ಯ. ಕಾರಣ, ತಾಲೂಕು ಆಡಳಿತ ತನ್ನ ಕಚೇರಿ ಮುಂಭಾಗದ ಯಾವ ಫಲಕಗಳನ್ನೂ ಬದಲಾಯಿಸಿಲ್ಲ. ಮೈತ್ರಿ ಸರ್ಕಾರದ ಅಥವಾ ವಿವಿಧ ಇಲಾಖೆಗಳ ಯೋಜನೆ ಪ್ರಚಾರಪಡಿಸಲೆಂದೇ ಇರುವ ಫಲಕಗಳಲ್ಲಿ ಇಂದಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಹಾಗೂ ಅವರ ಸರ್ಕಾರದ ಯೋಜನೆಗಳ ಮಾಹಿತಿ ಇರುವ ಫಲಕಗಳೇ ರಾರಾಜಿಸುತ್ತಿವೆ. 

ಉಡಾಫೆ ಉತ್ತರ: ಕಳೆದ ವಿಧಾನಸಭೆ ಚುನಾವಣೆ ಮತದಾನ ಜಾಗೃತಿ ಫಲಕ ಹಾಗೂ ತಹಶೀಲ್ದಾರ್‌ ಕಚೇರಿ, ತಾಪಂ ಕಚೇರಿ ಸಹಿತ ಇಡೀ ತಾಲೂಕು ಆಡಳಿತ ಆವರಣದಲ್ಲಿ ಹಳೆಯ ಫಲಕಗಳೇ ಇವೆ. ಯಾಕೆ ಸರ್‌, ಸರ್ಕಾರ ಬದಲಾಗಿದೆ. ಸಿಎಂ ಕೂಡ ಬದಲಾಗಿದ್ದಾರೆ, ನಿಮ್ಮ ಕಚೇರಿ ಎದುರು ಇನ್ನೂ ಸಿದ್ದರಾಮಯ್ಯ ಸಿಎಂ ಆಗಿರುವ ಫಲಕಗಳೇ ಇವೆಯಲ್ಲ ಎಂದು ತಹಶೀಲ್ದಾರ್‌ ರನ್ನು ಕೇಳಿದರೆ, ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂಬ ಆಕ್ರೋಶ ಜನರದ್ದು.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನೆ ನಾಮಫಲಕಗಳಿವೆ. ಇದರಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯೋ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಕೆಲವು ಗ್ರಾಮೀಣ ಜನರು ಮಾತ್ರ ಈ ಫಲಕ ನೋಡಿ ಇನ್ನೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಆಡಿಕೊಳ್ಳುವಂತಾಗಿದೆ. ವಿಧಾನಸಭೆ ಚುನಾವಣೆ ಮುಗಿದು, ಲೋಕಸಭೆ ಚುನಾವಣೆ ಹತ್ತಿರ ಬಂದಿದೆ. ಆದರೂ, ಕಳೆದ ವಿಧಾನಸಭೆ ಚುನಾವಣೆಯ ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ ಎನ್ನುವ ನಾಮಫಲಕಗಳು ಗೋಚರಿಸುತ್ತಿವೆ.

ರಾರಾಜಿಸುತ್ತಿರುವ ಹಳೆ ಯೋಜನೆ ಬ್ಯಾನರ್‌: ಹುನಗುಂದ ನಗರದ ತುಂಬ ಹಳೆಯ ಯೋಜನೆಗಳ ಬ್ಯಾನರ್‌ಗಳೇ ಎದ್ದು ಕಾಣುತ್ತಿವೆ. ಕೃಷ್ಣಾ ಭಾಗ್ಯ ಜಲ ನಿಗಮ, ಲೋಕೋಪಯೋಗಿ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗೆ ಸಂಬಂಧಿಸಿದ ಫಲಕಗಳಲ್ಲಿ ಇಂದಿನ ಸಿಎಂ, ಆಗಿನ ಸಚಿವರ ಭಾವಚಿತ್ರ ಇರುವ ಫಲಕ ತೆಗೆದಿಲ್ಲ. ಕೆಲವೊಂದು ಯೋಜನೆಗಳೇ ಬದಲಾದರೂ ಅವುಗಳ ಹೆಸರು ಇಂದಿಗೂ ತೆಗೆದುಹಾಕಿ, ಹೊಸ ಯೋಜನೆಗಳ ಕುರಿತು ಜನರಿಗೆ ಮಾಹಿತಿ ಕೊಡುವ ಕೆಲಸ ತಾಲೂಕು ಆಡಳಿತ ಮಾಡಿಲ್ಲ.

Advertisement

ಹೊಸ ಯೋಜನೆಗಳ ನಾಮಫಲಕ ಇಲ್ಲ: ಮೈತ್ರಿ ಸರ್ಕಾರದ ಮಹತ್ವಪೂರ್ಣ ಯೋಜನೆಗಳಾದ ರೈತರ ಬೆಳೆ ಸಾಲ ಮನ್ನಾ, ಬೀದಿ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಬಡವರ ಬಂಧು, ಮಹಿಳೆ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ, ಕಟ್ಟಡ ಕಾರ್ಮಿಕರ ಬದುಕಿಗೆ ಭದ್ರತೆಗಾಗಿ ಶ್ರಮಿಕ ಸೌರಭ, ಕೈಗಾರಿಕಾಭಿವೃದ್ಧಿಗಾಗಿ ಉದ್ಯಮ ಸ್ನೇಹಿ ಯೋಜನೆ, ಕೃಷಿ ಮತ್ತು ಕೃಷಿಕರಿಗಾಗಿ ರೈತ ಸಿರಿ, ನಗರಾಭಿವೃದ್ಧಿ ಯೋಜನೆ, ಆರೋಗ್ಯ ಕರ್ನಾಟಕ ಹೀಗೆ ಹಲವು ಹೊಸ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಕಾಳಜಿ ವಹಿಸಬೇಕಾದ ತಹಶೀಲ್ದಾರ್‌ ಸುಭಾಸ ಸಂಪಗಾವಿ ಅವರೇ, ಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು ಹತ್ತು ತಿಂಗಳು ಸಮೀಪಿಸುತ್ತಿವೆ. ಹೊಸ ಸರ್ಕಾರದ ನಾಮಫಲಕ ಮಾತ್ರ ತಾಲೂಕ ಆಡಳಿತ ಭವನದ ಮುಂದೆ ಕಾಣುತ್ತಿಲ್ಲ. ಹಿಂದಿನ ಸಿಎಂ, ಆಗಿನ ಸಚಿವರು ಹಾಗೂ ಹಳೆಯ ಯೋಜನೆಗಳ ಮಾಹಿತಿ ಫಲಕಗಳೇ ಇವೆ. ಇಡೀ ತಾಲೂಕು ಆಡಳಿತದಲ್ಲೇ ಇಂತಹ ಜಿಡ್ಡುಗಟ್ಟಿದ ಆಡಳಿತವಿದ್ದರೆ, ಜನ ಸಾಮಾನ್ಯರಿಗೆ ಯೋಜನೆಗಳ ಮಾಹಿತಿ ಸಿಗುವುದು ಯಾವಾಗ, ಅದರ ಲಾಭ ತಲುಪಿಸುವುದು ಯಾವಾಗ ?
ಕೃಷ್ಣಾ ಜಾಲಿಹಾಳ,
ಕೃಷಿಕ ಸಮಾಜ ನಿರ್ದೇಶಕ, ಹುನಗುಂದ

ಡಿಸಿಯವರೇ ಬರಬೇಕಾ?
ತಹಶೀಲ್ದಾರ್‌, ತಾಪಂ ಕಚೇರಿ ಸಹಿತ ಹಲವು ಸರ್ಕಾರಿ ಕಚೇರಿ ಎದುರು ಹಳೆಯ ಯೋಜನೆಗಳು, ವಿಧಾನಸಭೆ ಚುನಾವಣೆ ಮತದಾನ ಜಾಗೃತಿ ಫಲಕಗಳು ಬದಲಿಸಿಲ್ಲ. ಜಿಲ್ಲೆಗೆ ಸದ್ಯ ಯುವ-ಉತ್ಸಾಹಿ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಅಧಿಕಾರ ವಹಿಸಿಕೊಂಡಿದ್ದು, ಅವರು ಸರ್ಕಾರದ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಬೇಕು. ಕಚೇರಿಗಳ ಎದುರು, ಯೋಜನೆಗಳ ಮಾಹಿತಿ ಫಲಕ ಹಾಕಿರಬೇಕು ಎಂದು ಹೇಳುತ್ತಾರೆ. ಇದನ್ನು ತಹಶೀಲ್ದಾರ್‌ ಸುಭಾಸ ಸಂಪಗಾವಿ ಅವರಿಗೆ ಕೇಳಿದರೆ, ಹಳೆಯ ಫಲಕ ಇದ್ರೆ ಏನಾಯಿತು, ಹೊಸ ಫಲಕ ಹಾಕ್ತೇವೇಳ್ರಿ  ಎಂಬ ಉತ್ತರ ಕೊಡುತ್ತಾರೆ. ಹೀಗಾಗಿ ಇಲ್ಲಿನ ಹಳೆಯ ಫಲಕ ಬದಲಿಸಿ, ಸರ್ಕಾರದ ಯೋಜನೆ ಮಾಹಿತಿ ಫಲಕ ಅಳವಡಿಸಲು, ಡಿಸಿಯವರೇ ಬರಬೇಕಾ ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮಲ್ಲಿಕಾರ್ಜುನ ಬಂಡರಗಲ್ಲ 

Advertisement

Udayavani is now on Telegram. Click here to join our channel and stay updated with the latest news.

Next