ಹುನಗುಂದ: ಪಟ್ಟಣದ ಮಧ್ಯಭಾಗದಲ್ಲಿರುವ ಹಿರೇಹಳ್ಳದ ನೀರು ಎಸ್‌ಸಿ ಕಾಲೋನಿಗೆ ಪ್ರವೇಶಿಸುತ್ತಿದ್ದರೂ ಪುರಸಭೆ ಅ ಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ಮುಖಂಡರು ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡ ಹನಮಂತ ನಡುವಿನಮನಿ, ಹಿರೇಹಳ್ಳದ ನೀರು ಬಂದು ಹೋದ ಮೇಲೆ ಲಕ್ಷ್ಮೀ ನಗರ, ಡಾ| ಬಿ.ಆರ್.ಅಂಬೇಡ್ಕರ್, ಡಾ|ಬಾಬು ಜಗಜೀವನರಾಮ್ ಕಾಲೋನಿ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದು ಅಲ್ಲಿನ ನಿವಾಸಿಗಳು ನಿತ್ಯ ಹಾವು ಚೇಳಿನ ಜತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಚರಂಡಿ ಎಸ್ಟಿಮೆಂಟ್ ಮಾಡಿ ಮೂರು ವರ್ಷಗಳು ಗತಿಸಿದರೂ ಸರಿಯಾದ ಚರಂಡಿ ನಿರ್ಮಾಣವಾಗಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾ ಧಿಕಾರಿ ಅಶೋಕ ಪಾಟೀಲ, ಸದ್ಯ ಹಿರೇಹಳ್ಳದ ಸ್ವತ್ಛತೆಗೆ ಕ್ರಿಯಾಯೋಜನೆ ಸಿದ್ಧಗೊಳಿಸಿ ಜಿಲ್ಲಾಧಿ ಕಾರಿಗಳಿಗೆ ಕಳುಹಿಸಲಾಗಿದೆ. ಶೀಘ್ರ ಸ್ವತ್ಛತೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ದಲಿತರು ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು. ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತದಿಂದ ಗ್ರಾಮೀಣ ಮಟ್ಟದ ದಲಿತರ ಕುಂದುಕೊರತೆ ಸಭೆ ನಡೆಸಬೇಕು. ಕಮಲದಿನ್ನಿ ಗ್ರಾಮದ ಪುನರ್‌ವಸತಿ ಕೇಂದ್ರದಲ್ಲಿ ಹಕ್ಕು ಪತ್ರ ನೀಡದೇ ಇರುವುದರಿಂದ ದಲಿತರು ವಾಸಿಸುತ್ತಿರುವ ಶೆಡ್ ತೆರವುಗೊಳಿಸುವಂತೆ ಅಲ್ಲಿನ ಮೇಲ್ವರ್ಗದ ಜನರು ದಲಿತರ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಹೊಸಮನಿ, ತಹಶೀಲ್ದಾರ್ ಜಿ.ಎಂ.ಕುಲಕರ್ಣಿ ಅವರನ್ನು ಪ್ರಶ್ನಿಸಿದರು.
ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ನಾಳೆ ನಾನು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು. ಚಿಕ್ಕಮಾಗಿಯಲ್ಲಿ ಮನೆ ಹಂಚಿಕೆಯಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ದಲಿತ ಮುಖಂಡ ಬಸವರಾಜ ಹೊಸಮನಿ ಆರೋಪಿಸಿದರು. ಈ ಕುರಿತು ನನಗೆ ಮಾಹಿತಿ ಬಂದಿದೆ. ನಾನು ಮತ್ತು ಸಿಪಿಐ ಅಯ್ಯನಗೌಡ ಪಾಟೀಲ ಅಲ್ಲಿಗೆ ಹೋಗಿ ಬಗೆಹರಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ ಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆಗಳು ಕಳಪೆ ಮಟ್ಟದಿಂದ ಕೂಡಿವೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೃಷಿ ಇಲಾಖೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕಿರುವ ಅನುದಾನದಲ್ಲಿ ಪಿಂಕ್ಲರ್ ಪೈಪ್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಮುಖಂಡ ಸಂಗಪ್ಪ ಚಲವಾದಿ ಆರೋಪಿಸಿದರು. ಅಬಕಾರಿ ಇನ್ಸ್‌ಪೆಕ್ಟರ್ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಅ ಧಿಕಾರಿ ರವಿ ಇದ್ದಲಗಿ, ದಲಿತ ಮುಖಂಡರು ಹಾಜರಿದ್ದರು.