Advertisement

ಸಂಬಂಧಗಳ ಸಂಕೀರ್ಣತೆಗೆ ಹಾಸ್ಯದ ಲೇಪನ “ಹೇ ಸಿರಿ’

05:54 PM Apr 11, 2019 | mahesh |

ಸಂಬಂಧಗಳಲ್ಲಿನ ಸಂಕೀರ್ಣತೆಯೇ ಈ ನಾಟಕದ ಜೀವಾಳ. ಕಳೆದುಹೋದಳು ಅಂದು ಕೊಂಡ ಸಿರಿಯ ಸುತ್ತಲಿನ ಜನರ ಸಂಕೀರ್ಣ ಸಂಬಂಧಗಳು, ಬೇಕು ಬೇಕೆಂಬ ಹಪಾಹಪಿ, ಅನುಮಾನ ಇವೆಲ್ಲವನ್ನೂ ನವಿರಾದ ಹಾಸ್ಯದಲ್ಲಿ ಹೇಳುವುದು ಸುಲಭವಲ್ಲ. ಆದರೆ ಆ ಪ್ರಯತ್ನ ಇಲ್ಲಿ ಎದ್ದು ಕಾಣುತ್ತದೆ.

Advertisement

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ.27ರಂದು ಉಡುಪಿಯ ರಂಗಭೂಮಿ (ರಿ.) ನಡೆಸಿಕೊಟ್ಟ ನಾಟಕ “ಹೇ ಸಿರಿ’. ಸರ್ವಂ ಬೆಂಗಳೂರು, ತಂಡದವರು ಪ್ರದರ್ಶಿಸಿದ ಈ ನಾಟಕದ ರಚನೆ ಹಾಗೂ ನಿರ್ದೇಶನ ದಿವ್ಯಾ ಕಾರಂತ ಅವರದ್ದು. ಹೊಸ ತರಹದ ನಾಟಕಗಳು ಬರುತ್ತಿರುವಾಗ ಹಾಸ್ಯನಾಟಕ, ಸಾಮಾಜಿಕ ನಾಟಕಗಳೂ ಹೊಸ ಯೋಚನೆಗಳಂತೆ ಬದಲಾಗಬಹುದು ಅನ್ನುವುದಕ್ಕೆ “ಹೇ ಸಿರಿ’ ಒಂದು ಉದಾಹರಣೆ. ನಾಟಕದ ಕಥಾವಸ್ತು ಒಂದು ಮನೆಯ ಕಥೆ, ಮನೆಯಲ್ಲಿನ ಸಂಬಂಧಗಳ ಸಂಕೀರ್ಣತೆ, ಮನಸ್ಸುಗಳ ಜೊತೆ ಆಗುವ ಸಂಘರ್ಷಗಳು, ಹಾಗೇ ಮನೆಯಲ್ಲಿನ ಕಷ್ಟ ಇವೆಲ್ಲವನ್ನೂ ನಾಟಕದಲ್ಲಿ ಹೇಳುವ ಪ್ರಯತ್ನ ಇದೆ.

ಕಳೆದು ಹೋದಳು ಅಂದು ಕೊಂಡ ಸಿರಿಯ ಸುತ್ತ ಹೆಣೆಯುವ ಕಥೆಯಲ್ಲಿ, ಸಿರಿಯ ಆಗಮನ ಆಗುವುದೇ ಇಲ್ಲ, ಆದರೆ ಮನದ ಬೇಗುದಿಗಳೆಲ್ಲಾ ಹೊರ ಬರುತ್ತಾ ಸಾಗುತ್ತದೆ. ಒಬ್ಬರಲ್ಲಿ ಇನ್ನೊಬ್ಬರು ತಪ್ಪು ಕಂಡು ಹಿಡಿಯುವ ಈ ಪ್ರಕ್ರಿಯೆ ನಿಜವಾಗಿ ಎಷ್ಟು ಹಾಸ್ಯಾಸ್ಪದ ಎಂಬುದನ್ನ ನವಿರಾದ ಹಾಸ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಬಂಧಗಳಲ್ಲಿನ ಸಂಕೀರ್ಣತೆಯೇ ಈ ನಾಟಕದ ಜೀವಾಳ. ಕಳೆದುಹೋದಳು ಅಂದು ಕೊಂಡ ಸಿರಿಯ ಸುತ್ತಲಿನ ಜನರ ಸಂಕೀರ್ಣ ಸಂಬಂಧಗಳು, ಬೇಕು ಬೇಕೆಂಬ ಹಪಾಹಪಿ, ಅನುಮಾನ ಇವೆಲ್ಲವನ್ನೂ ನವಿರಾದ ಹಾಸ್ಯದಲ್ಲಿ ಹೇಳುವುದು ಸುಲಭವಲ್ಲ. ಆದರೆ ಆ ಪ್ರಯತ್ನ ಇಲ್ಲಿ ಎದ್ದು ಕಾಣುತ್ತದೆ. ಗಂಡ ಹೆಂಡಿರ ಸಂಬಂಧ ಅದರ ಮಧ್ಯೆ ಇರಬೇಕಾದ ನಂಬಿಕೆಗಳ ಅವಶ್ಯಕತೆ ನಾಟಕದ್ದುದ್ದಕ್ಕೂ ಹಾಸ್ಯ ಪ್ರಜ್ಞೆಯ ರೂಪದಲ್ಲಿ ಬರುತ್ತದೆ. I am not marriage material ಅನ್ನುವ ವ್ಯಕ್ತಿಯೇ ಮದುವೆಗಳನ್ನ ಉಳಿಸುತ್ತಾ ಇಂದಿನ ಪೀಳಿಗೆಯನ್ನ ಅವರದ್ದೇ ರೀತಿಯಲಿ ಬೆರೆಯುತ್ತಾ ಪ್ರಬುದ್ಧತೆ ಮೆರೆಯುವ ನಾಯಕ ನಟನ ಸ್ನೇಹಿತ ಇಡೀ ನಾಟಕದ ಖಳನಾಯಕನೋ ಇಲ್ಲ ನಾಟಕವನ್ನ ಹಿಡಿದಿಟ್ಟುಕೊಳ್ಳುವ ಹೊಸ ವ್ಯಕ್ತಿತ್ವದವನೋ ಅನ್ನಿಸಿ ಬಿಡುತ್ತಾನೆ. ನಾಯಕಿಯ ತಂಗಿ ಎಲ್ಲವೂ ತನ್ನದಾಗಿಸಿ ಕೊಳ್ಳಬೇಕೆಂಬ ಚಂಚಲತೆಯ ಆಗರ, ಆಕೆ ಇಂದಿನ ಯುವಕರ ಹಪಹಪಿಯನ್ನ ಪ್ರಕಟ ಪಡಿಸುತ್ತಾಳೆ.

ನಮಗೆ ನಾಟಕ ಬಹಳಷ್ಟು ಹೇಳದಿದ್ದರೂ ಹೇಳಬೇಕಾದ ಸಂಬಂಧಗಳನ್ನ ಬಿಚ್ಚಿ ತೋರಿಸುತ್ತದೆ. ಕಾಲೇಜು ವಿದ್ಯಾರ್ಥಿಗಳು ನಾಟಕದ ಉದ್ದಕ್ಕೂ ನಕ್ಕು ನಲಿಯುತ್ತಿದ್ದ ಪರಿ ನಾಟಕದ ಉದ್ದೇಶವನ್ನು ಸಾರ್ಥಕಗೊಳಿಸಿದಕ್ಕೆ ಉದಾಹರಣೆ. ನಾಟಕದ ಮೂಲ ಗಟ್ಟಿತನ ನಾಟಕದ ಉತ್ತಮ ಹಾಸ್ಯ ಹಾಗೂ ನಟರ ಗಟ್ಟಿಯಾದ ಅಭಿನಯ. ಪ್ರತಿ ಪಾತ್ರ ಅವರೇ ಏನೋ ಅನ್ನಿಸುವಷ್ಟು ತಲ್ಲೀನತೆ ನಟರಲ್ಲಿ ಕಾಣುತ್ತದೆ. ಇನ್ನೂ ಏನೋ ಇದೆ ಅಂದುಕೊಳ್ಳುವಷ್ಟರಲ್ಲಿ ನಾಟಕ ಮುಗಿಯವ ಸಣ್ಣ ಅಪ್ರಬುದ್ಧತೆ ಕಾಣುತ್ತದೆ. ನಾಟಕದ ಬರಹದಲ್ಲಿ ಇನ್ನೊಂದಷ್ಟು ಗಟ್ಟಿತನ ತರಬಹುದಿತ್ತು ಅನ್ನಿಸುತ್ತದೆಯಾದರೂ ಅಭಿನಯ ಎಲ್ಲವನ್ನೂ ಮುಚ್ಚಿ ಮೆಚ್ಚುಗೆಯನ್ನ ತರಿಸುತ್ತದೆ. ಅಲ್ಲಿಲ್ಲ ಒಂದೇ ಕಡೆ ಜಮೆಯಾಗುತ್ತಾರೆ ಎಲ್ಲಾ ಕಲಾವಿದರು ಅದನ್ನ ಬೇರೆಯಾಗಿಸಬಹುದಿತ್ತೇನೋ ಅನ್ನಿಸುತ್ತದೆ. ಆದರೆ ಯುವಕರಿಂದ ಯುವಕರಿಗಾಗಿ ಮಾಡಿದ ಪ್ರಯೋಗ ಯುವಕರಲ್ಲಿ ಸೈ ಅನ್ನಿಸಿಕೊಳ್ಳುತ್ತದೆ. ಇಂತಹ ಹಾಸ್ಯಭರಿತ ನಾಟಕಗಳೂ ಸಮಾಜಕ್ಕೆ ಸಂಬಂಧಗಳ ಅವಶ್ಯಕತೆ ಬಗ್ಗೆ ಮಾತನಾಡಬಹುದು ಅಂತ ತೋರಿಸಿಕೊಟ್ಟ ಪ್ರಯೋಗ ಹೇ ಸಿರಿ. ನಮ್ಮ ದೈನಂದಿನ ಆಗುಹೋಗುಗಳಲ್ಲಿ ಕಳೆದು ಹೋಗುತ್ತಾ ನಮ್ಮ ನಮ್ಮ ಮಕ್ಕಳನ್ನ, ನಮ್ಮ ಹಿಂದಿನ ಜೀವನದ ಆಗುಹೋಗುಗಳಲ್ಲಿ ಹುಡುಕುವ ಕೆಟ್ಟ ಪ್ರಯತ್ನದ ಬಗ್ಗೆ ಮಾತನಾಡುತ್ತದೆ ಈ ನಾಟಕ

ಡಾ|ರಶ್ಮಿ ಕುಂದಾಪುರ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next