“ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಚಿತ್ರ ಈಗಾಗಲೇ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಚಿತ್ರ ಜನವರಿ 12 ರಂದು ಬಿಡುಗಡೆಯಾಗುತ್ತಿದೆ. ಕನ್ನಡದಿಂದ ಬೇರೆ ಯಾವುದೇ ದೊಡ್ಡ ಚಿತ್ರಗಳು ಅಥವಾ ಸ್ಟಾರ್ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಆದರೂ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ಗೆ ಸಾಕಷ್ಟು ಸವಾಲು ಎದುರಾಗಿದೆ. ಅದು ಪರಭಾಷೆಯಿಂದ.
ಹೌದು, ಪರಭಾಷೆಯ ಸ್ಟಾರ್ ಚಿತ್ರಗಳು ಕೂಡಾ ಜನವರಿ 12 ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರಗಳ ನಡುವೆ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ತನ್ನ ಪ್ರೇಕ್ಷಕರನ್ನು ಸೆಳೆಯಬೇಕಾಗಿದೆ. ಹೌದು, ತಮಿಳಿನ ಎರಡು ದೊಡ್ಡ ಸ್ಟಾರ್‌ಗಳ ಹಾಗೂ ತೆಲುಗಿನ ಎರಡು ಸ್ಟಾರ್‌ಗಳ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದೆ.
ತೆಲುಗಿನಲ್ಲಿ ಬಾಲಕೃಷ್ಣ ಅವರ “ಜಯಸಿಂಹ’ ಹಾಗೂ ಪವನ್ ಕಲ್ಯಾಣ್ ನಟನೆಯ “ಅಜ್ಞಾತವಾಸಿ’ ಚಿತ್ರಗಳು ಬಿಡುಗಡೆಯಾದರೆ, ತಮಿಳಿನಲ್ಲಿ ಸೂರ್ಯ ನಾಯಕರಾಗಿರುವ “ತಾನ ಸೇರಂದ ಕೂಟಂ’ ಹಾಗೂ ವಿಕ್ರಮ್ ಅಭಿನಯದ “ಸ್ಕೆಚ್’ ಚಿತ್ರಗಳು ಈ ವಾರ (ಜ.12) ರಂದು ಬಿಡುಗಡೆಯಾಗುತ್ತಿವೆ. ಈ ನಾಲ್ಕು ಸ್ಟಾರ್ ಸಿನಿಮಾಗಳ ಮಧ್ಯೆ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಕೂಡಾ ತೆರೆಕಾಣುತ್ತಿದೆ.
ಹಾಗೆ ನೋಡಿದರೆ ಕನ್ನಡದಲ್ಲಿ ಸಂಕ್ರಾಂತಿಗೆ “ಟಗರು’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಗಾಗಿ, ಬೇರೆ ಯಾವುದೇ ಸ್ಟಾರ್‌ಗಳ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ಪರಭಾಷೆಯಲ್ಲಿ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ನಾಲ್ಕು ಪರಭಾಷಾ ಸಿನಿಮಾಗಳ ಮಧ್ಯೆ ಬರುತ್ತಿರುವ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್, “ನಮಗೆ ನಮ್ಮ ಸಿನಿಮಾ ಬಗ್ಗೆ ನಂಬಿಕೆ ಇದೆ. ಈ ಸಿನಿಮಾ ಕೂಡಾ “ಕಿರಿಕ್ ಪಾರ್ಟಿ’, “ಗೋಧಿ ಮೈ ಬಣ್ಣ’ ತರಹ ದೊಡ್ಡ ಮಟ್ಟಕ್ಕಾಗುತ್ತೆ. ಮುಖ್ಯವಾಗಿ ಯಾವುದೇ ಸ್ಟಾರ್ ಸಿನಿಮಾವಿದ್ದರೂ ಫಸ್ಟ್ ಡೇ ಫಸ್ಟ್ ಶೋನ ರಿಸಲ್ಟ್ ಮೇಲೆ ಎಲ್ಲವೂ ಅವಲಂಭಿತವಾಗಿರುತ್ತದೆ. ಸಿನಿಮಾ ಚೆನ್ನಾಗಿಲ್ಲದಿದ್ದರೆ ಜನ ಚೆನ್ನಾಗಿರುವ ಸಿನಿಮಾ ಕಡೆ ವಾಲುತ್ತಾರೆ’ ಎನ್ನುತ್ತಾರೆ.