ಮುಂಡರಗಿ: ಮಾನಸಿಕವಾಗಿ ಖನ್ನತೆಗೆ ಒಳಗಾದ ವ್ಯಕ್ತಿಯೋರ್ವನನ್ನು ಪೊಲೀಸರು ಸರಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ರವಿವಾರ ಪಟ್ಟಣದಲ್ಲಿ ಜರುಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಬೆಂಗಳೂರಿನ ರಾಜಾಜಿನಗರದ ಕಂಫರ್ಟ್ ಜೋನ್ ಪಿಜಿಯಿಂದ ಮಲ್ಲಿಕಾರ್ಜುನ ಮಹಾಂತಯ್ಯ ಗುರುಮಠದ ವ್ಯಕ್ತಿಯು ಕಾಣೆಯಾಗಿರುವ ಬಗ್ಗೆ ಸುಬ್ರಮಣ್ಯ ನಗರ ಠಾಣೆಯಲ್ಲಿ ವಾರದ ಹಿಂದೆಯಷ್ಟೇ ಪ್ರಕರಣ ದಾಖಲಾಗಿತ್ತು. ಆದರೆ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಪೊಲೀಸರು ಬೆಳಗ್ಗೆ ಗಸ್ತು ತಿರುಗುವಾಗ ಮಲ್ಲಿಕಾರ್ಜುನ ಗುರುಮಠನನ್ನು ಮಾತನಾಡಿಸಿದಾಗ ಮೇಲ್ನೋಟಕ್ಕೆ ಮಾನಸಿಕವಾಗಿ ಖನ್ನತೆಗೆ ಒಳಗಾಗಿರುವ ಬಗ್ಗೆ ಮನಗಂಡು ಸರಕಾರಿ ತಾಲೂಕಾಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸುಸ್ತು ಮತ್ತು ಖನ್ನತೆಯಿಂದ ಬಳಲಿರುವ ಮಲ್ಲಿಕಾರ್ಜುನ ಗುರುಮಠದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಸ್ತು ತಿರುಗುವಾಗ ಸಿಪಿಐ ಸುಧೀರಕುಮಾರ ಬೆಂಕಿ, ಪಿಎಸ್‌ಐ ಚಂದ್ರಪ್ಪ ಈಟಿ ಮತ್ತು ಸಿಬ್ಬಂದಿಯು ಮಲ್ಲಿಕಾರ್ಜುನ ಗುರುಮಠದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯಲ್ಲಿ ಕೊಡಿಸಿದ್ದಾರೆ.
ಮೂಲತಃ ವಿಜಯಪುರದ ರಾಮದೇವ್ ನಗರದ ನಿವಾಸಿ ಸಾಫ್ಟ್‌ವೇರ್ ಇಂಜನಿಯರ್ ಆಗಿದ್ದ ಮಲ್ಲಿಕಾರ್ಜುನ ಗುರುಮಠದ ಎಂ.ಟೆಕ್ ಅಧ್ಯಯನ ಮಾಡಿ, ಬೆಂಗಳೂರು ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾರದಿಂದ ಮಲ್ಲಿಕಾರ್ಜುನ ಗುರುಮಠದ ತಾವು ವಾಸವಾಗಿದ್ದ ಕಂಫರ್ಟ್ ಜೋನ್ ಪಿಜಿಯಿಂದ ಕಾಣೆಯಾಗಿದ್ದರು. ಮಲ್ಲಿಕಾರ್ಜುನ ಗುರುಮಠದ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಆತಂಕಗೊಂಡು ಬೆಂಗಳೂರಿನ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಲ್ಲಿಕಾರ್ಜುನ ಗುರುಮಠದರ ತಾಯಿ ಮಗನ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದರು. ಮಲ್ಲಿಕಾರ್ಜುನ ಸಿಕ್ಕಿರುವ ಕಾರಣಕ್ಕೆ ಕುಟುಂಬಸ್ಥರು ನಿರಾಳರಾಗಿ ಕುಟುಂಬದಲ್ಲಿ ನೆಮ್ಮದಿ ಮೂಡಿದೆ.
ಮಾನವೀಯತೆ ದೃಷ್ಟಿಯಿಂದ ಮುಂಡರಗಿ ಪೊಲೀಸರು ಮಲ್ಲಿಕಾರ್ಜುನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯ ಕಳಕಳಿಯಿಂದ ನಡೆದುಕೊಂಡಿರುವುದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಬೆಂಗಳೂರಿನ ಪಿಜಿಯಿಂದ ಮುಂಡರಗಿಯವರೆಗೂ ಹೇಗೆ ಇಲ್ಲಿಯವರೆಗೆ ಬಂದ ಎನ್ನುವುದರ ಬಗ್ಗೆ ಮಲ್ಲಿಕಾರ್ಜುನ ಗುಣಮುಖನಾದ ನಂತರ ಹೇಳಬೇಕಿದೆ.
-ಶಶಿಧರ ಗುರುಮಠದ, ಮಲ್ಲಿಕಾರ್ಜುನ ಸಹೋದರ, ವಿಜಯಪುರ.
-ಹು.ಬಾ.ವಡ್ಡಟ್ಟಿ