ಮಾಗಡಿ: ಪೊಲೀಸ್ ಎಂದರೆ ಮೃಗಗಳ ರೀತಿ ವರ್ತಿಸುತ್ತಾರೆ, ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಭಾವನೆ ಬಹುತೇಕ ಮಂದಿಯಲ್ಲಿದೆ. ಆದರೆ ಮಾಗಡಿ ಪೊಲೀಸ್ ಠಾಣೆಯ ಚೀತಾ ಗಸ್ತು ವಾಹನದ ಪೊಲೀಸ್ ಪೇದೆ ಮಾನವೀಯತೆ ಮೆರೆದು ಮೆಚ್ಚುಗೆಗೆ ಪ್ರಾತ್ರರಾಗಿದ್ದಾರೆ.
ಅಕ್ಷರಸ್ಥರಾದರೂ ಆಧುನಿಕತೆಯ ಭರಾಟೆಯ ಹೈಟೆಕ್ ಜೀವನ ನಡೆಸಲು ಹೆತ್ತ ತಾಯಿಯನ್ನೇ ದೂರ ಮಾಡುವವರಿದ್ದಾರೆ. ಬಹುತೇಕ ಮಂದಿ ತಂದೆ ತಾಯಿಯರನ್ನು ವಯೋವೃದ್ಧರೆಂದು ಅವರ ಹಾರೈಕೆ ಮಾಡಲಾಗದೆ ಅನಾಥಾಶ್ರಕ್ಕೆ ಬಿಡುವವರು ಕೇಳಿದ್ದೇವೆ. ಮನೆಯಲ್ಲಿನ ಮೊಲೆಯೊಂದರಲ್ಲಿ ಕೂಡಿ ಹಾಕಿ ಉಳಿದ ಅನ್ನವನ್ನು ಕೊಡುವವರೂ ಸಮಾಜದಲ್ಲಿದ್ದಾರೆ. ಇಂಥವರ ನಡುವೆ ಮಾನವೀಯತೆ ಮೆರವವರೂ ಇದ್ದಾರೆ.
ಪಟ್ಟಣದ ತಿರುಮಲೆ ಗ್ರಾಮದ ಬ್ರಾಹ್ಮಣ ಸಮುದಾಯದ 78 ವರ್ಷದ ವಯೋವೃದ್ಧೆ ಕಾವೇರಮ್ಮ ಮನೆಯಲ್ಲಿ ಒಂಟಿ ಜೀವನ ನಡೆಸಿಕೊಂಡು ಬರುತ್ತಿದ್ದರು. ಇವರಿಗೆ ಮಕ್ಕಳು ಯಾರು ಇಲ್ಲ. ಹಲವು ವರ್ಷಗಳ ಹಿಂದೆಯೇ ಪತಿ ತೀರಿಕೊಂಡಿದ್ದಾರೆ. ಕಾವೇರಮ್ಮ ಪ್ರತಿನಿತ್ಯ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಅನ್ನ ಪ್ರಸಾದವನ್ನು ತಿಂದು ಜೀವಿಸುತ್ತಿದ್ದರು. ಕಳೆದ ಹತ್ತು ದಿನಗಳ ಹಿಂದೆಯಿಂದ ಸರಿಯಾಗಿ ಊಟವನ್ನು ಮಾಡದೆ ಅನಾರೋಗ್ಯದಿಂದ ಮನೆಯಲ್ಲಿಯೇ ಮಲಗಿದ್ದಲ್ಲೇ ಮಲಗಿದ್ದರಿಂದ ಆರೋಗ್ಯ ಅದಗೆಟ್ಟು ಹಾಸಿಗೆ ಹಿಡಿದಿದ್ದರು. ಈ ವಿಚಾರವನ್ನು ಕಿರಣ್ ಮತ್ತು ಸಾರ್ವಜನಿಕರೊಬ್ಬರು ಮಾಗಡಿ ಠಾಣೆಯ ಸಿಪಿಐ ಗಿರಿರಾಜ್ ಸಾಹೇಬರಿಗೆ ಕರೆ ಮಾಡಿ ತಿಳಿಸಿದ್ದರಿಂದ ಸಿಪಿಐ ಅವರ ಮಾರ್ಗದರ್ಶನದ ಮೇರೆಗೆ ಠಾಣೆಯ ಚಿತಾ ಗಸ್ತು ವಾಹನದ ಸಿಬ್ಬಂದಿ ಕುಮಾರಸ್ವಾಮಿ ಎಂಬುವರು ಕಾವೇರಮ್ಮ ಅವರ ಮನೆಗೆ ತೆರಳಿ ಹಾಸಿಗೆ ಹಿಡಿದಿದ್ದ ಕಾವೇರಮ್ಮ ಅವರನ್ನು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಆಕೆಯ ಆರೋಗ್ಯದ ಹದಗಿಟ್ಟಿರುವುದು ಕಣ್ಣಾರೆ ಕಂಡ ಕುಮಾರಸ್ವಾಮಿ ಸಿಪಿಐ ಮಾರ್ಗದರ್ಶನದಂತೆ ಆಕೆಯನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಕಳೆದ ಎರಡು ದಿನಗಳಿಂದಲೂ ಆಕೆಗೆ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ವಾರಸುದಾರರನ್ನು ವಿಚಾರಿಸಲಾಗಿ ಯಾರೂ ಕೂಡ ಬಾರದೆ ಇದ್ದುದ್ದರಿಂದ ವೃದ್ಧೆ ಕಾವೇರಮ್ಮ ಅವರನ್ನು ಬೆಂಗಳೂರಿನ ಲಗ್ಗೆರೆಯ ಆಸರೆ ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ತಾಯಿ ಭಾವನೆಯಿಂದ ಕರ್ತವ್ಯ ಮಾಡಿರುವೆ: ಪೊಲೀಸ್ ಎಂದರೆ ಭಯ ಬೇಡ, ಭರವಸೆ ಇರಲಿ, ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆ ಇರಬೇಕು. ತಿರುಮಲೆಯಲ್ಲಿ ಒಬ್ಬಂಟಿಯಾಗಿ ಊಟ ತಿಂಡಿ ಇಲ್ಲದೆ ಹಲವು ದಿನಗಳಿಂದ ಮನೆಯಲ್ಲಿದ್ದ ಅಸ್ವಸ್ಥಗೊಂಡಂತೆ ಮಲಗಿದ್ದ ಕಾವೇರಮ್ಮ ಅವರ ವಿಚಾರ ತಿಳಿದು ಮಾನವೀಯತೆ ದೃಷ್ಟಿ ಆಕೆಯ ಮನೆಗೆ ತೆರಳಿ ನೋಡಿದಾದ ಮೈಮೇಲೆ ಬಟ್ಟೆ ಸರಿಪಡಿಸಿಕೊಳ್ಳಲು ಆಗದಂತೆ ನಿತ್ರಾಂಣಗೊಂಡಿದ್ದರು. ನಾನು ಅಕ್ಕಪಕ್ಕದವರನ್ನು ಕರೆದು ಆಕೆ ಮಹಿಳೆ, ಬಟ್ಟೆ ತೊಡಿಸಿ ಎಂದರೂ ಸೋಂಕಿನ ಭೀತಿಯಿಂದಯಾರೂ ಸಹ ಮುಂದೆ ಬರಲಿಲ್ಲ. ಆಕೆ ನನ್ನ ತಾಯಿ ಎಂಬ ಭಾವನೆಯಿಂದಲೇ ಇದು ನನ್ನ ಕರ್ತವ್ಯ ಎಂದು ತಿಳಿದು ಆಕೆಗೆ ನಾನೇ ಸ್ವತಃ ಬಟ್ಟೆ ತೊಡಿಸಿ ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇನೆ. ಜತೆಗೆ ವೃದ್ಧಾಶ್ರಮಕ್ಕೂ ಸೇರಿಸಲಾಗಿದೆ ಎಂದು ಚಿತಾ ವಾಹನ ಸಿಬ್ಬಂದಿ ಕುಮಾರಸ್ವಾಮಿ ತಿಳಿಸಿದರು.
– ತಿರುಮಲೆ ಶ್ರೀನಿವಾಸ್