Advertisement

ಕಷ್ಟದಲ್ಲೂ ಮಾನವೀಯತೆ ಮೆರೆದ ರೈತರು

11:29 AM Feb 21, 2020 | Suhan S |

ನೆಲಮಂಗಲ : ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯದೇ ಮಠಗಳು ಹಾಗೂ ದಾಸೋಹ ಕೇಂದ್ರಗಳಿಗೆ ರವಾನೆ ಮಾಡುವ ಮೂಲಕ ಸಂಕಷ್ಟದಲ್ಲೂ ಮಾನವೀಯತೆ ಮೆರೆದಿದ್ದಾರೆ.

Advertisement

ಬೆಲೆ ಕುಸಿತ: ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆ, ಯಶವಂತಪುರ ಹಾಗೂ ನೆಲಮಂಗಲ ಮಾರುಕಟ್ಟೆಯಲ್ಲಿ ಹುರುಳಿಕಾಯಿ ಕೆ.ಜಿ 15ರೂ, ಹಾಗಲಕಾಯಿ ಕೆ.ಜಿಗೆ 10 ರೂ, ಟಮೋಟ ಕೆ.ಜಿಗೆ 10 ಹಾಗೂ ಒಂದು ಸೋರೆಕಾಯಿ 3 ರೂಪಾಯಿಗೆ ಖರೀದಿಸುತಿದ್ದಾರೆ. ಇನ್ನೂ ಎಲೆಕೋಸು 35 ಕೆ.ಜಿಯ ಮೂಟೆಗೆ 70 ರೂ.ಬೆಲೆಗೆ ಕುಸಿತ ಕಂಡಿದೆ.

ನಷ್ಟ: ಎಲೆಕೋಸು ಬೆಳೆಗೆ ಖರ್ಚು ಮಾಡಲಾಗಿದ್ದ ಎಕರೆಗೆ 60ರಿಂದ 80 ಸಾವಿರ ರೂಪಾಯಿ ನಷ್ಟದ ಜೊತೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಹಾಗೂ ಕೆಲಸಗಾರರ ಕೂಲಿ ಖರ್ಚು ಲೆಕ್ಕಾಚಾರ ಮಾಡಿದ ಅನೇಕ ರೈತರು, ರಸ್ತೆಗೆ ಸುರಿಯುವುದಕ್ಕಿಂತ ನಷ್ಟದಲ್ಲಿ ಪುಣ್ಯದ ಕೆಲಸ ಮಾಡೋಣ ಎಂದು ಬೆಳೆದ ತರಕಾರಿಗಳನ್ನು ಮಠಗಳ ದಾಸೋಹ ಕೇಂದ್ರಗಳಿಗೆ ನೀಡಿದ್ದಾರೆ.

ಮಠಗಳಿಗೆ ರವಾನೆ: ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ರೈತ ಬಾಬು ಹಾಗೂ ವಾಸು 300ಕ್ಕಿಂತ ಹೆಚ್ಚು ಮೂಟೆಗಳನ್ನು ಆದಿಚುಂಚನಗಿರಿ ದಾಸೋಹ ಭವನ, ಧರ್ಮಸ್ಥಳ ದಾಸೋಹ ಭವನ, ಸಿದ್ಧಗಂಗೆ ದಾಸೋಹಭವನ ಹಾಗೂ ಯಡಿಯೂರಿನ ದಾಸೋಹ ಭವನಕ್ಕೆ ಕಳುಹಿಸಿದ್ದಾರೆ.

ಉಚಿತ ಸೇವೆ : ರೈತರು ರಾಜ್ಯದ ಮಠಗಳ ದಾಸೋಹ ಕೇಂದ್ರಕ್ಕೆ ಎಲೆಕೋಸು ರವಾನೆ ಮಾಡುವ ವಿಷಯ ತಿಳಿದ ಗ್ರಾಮದ ಹತ್ತಾರು ಜನರು ಕೋಸುಗಳನ್ನು ಮೂಟೆಗೆ ತುಂಬಿ ಲಾರಿಗೆ ಲೋಡ್‌ ಮಾಡಿದರೆ, ಇನ್ನೂ ಕೆಲವರು ವಾಹನಗಳನ್ನು ಉಚಿತವಾಗಿ ನೀಡುವ ಮೂಲಕ ರೈತರಿಗೆ ನೆರವಾಗಿದ್ದಾರೆ.

Advertisement

ರೈತರ ಮನವಿ : ಸರ್ಕಾರ ಬೆಳೆಗಳ ಬೆಲೆ ಕುಸಿತದ ಬಗ್ಗೆ ಯೋಚನೆ ಮಾಡುತ್ತಿಲ್ಲ, ರಾಗಿ ಖರೀದಿ ಕೇಂದ್ರ ಮಾಡಿ ನೂರೆಂಟು ದಾಖಲೆ ಕೇಳುತ್ತಾರೆ.ರೈತ ನಷ್ಟದಿಂದ ನರಳುತಿದ್ದರೂ, ಸರ್ಕಾರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿನಂದನೆ: ರೈತರ ಸಮಾಜಮುಖೀ ನಿರ್ಧಾರಕ್ಕೆ ಕೆಲವು ಮಠಗಳ ಮಠಾಧೀಶರು, ಸ್ಥಳೀಯ ಮುಖಂಡರು, ರೈತರು,ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸಂಪೂರ್ಣ ಕುಸಿತ ಕಂಡಿದೆ. ಎಲೆಕೋಸು ಮಾರುಕಟ್ಟೆಗೆ ತೆಗೆದುಕೊಂಡು ಬರುವ ಖರ್ಚು ಸಿಗುತ್ತಿಲ್ಲ. ರಸ್ತೆಗೆ ಸುರಿಯುವುದಕ್ಕಿಂತ ಬಡಮಕ್ಕಳು, ಸಮಾಜದ ಜನರು ತಿನ್ನಲಿ ಎಂದು ಮಠಗಳ ದಾಸೋಹ ಕೇಂದ್ರಗಳಿಗೆ ನೀಡಿದ್ದೇವೆ .ಬಾಬು , ರೈತ

Advertisement

Udayavani is now on Telegram. Click here to join our channel and stay updated with the latest news.

Next