Advertisement

ಹಿಂದೂ ಧರ್ಮದಿಂದ ಮನುಕುಲದ ಉದ್ಧಾರ

05:42 PM Sep 23, 2018 | |

ಹೊಳಲ್ಕೆರೆ: ಹಿಂದೂ ಧರ್ಮ ಸತ್ಯ ಸಂದೇಶಗಳನ್ನು ಬಿತ್ತರಿಸುವ ಮೂಲಕ ಮನುಕುಲವನ್ನು ಒಗ್ಗೂಡಿಸಿ ಉದ್ಧರಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.

Advertisement

ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಐದನೇ ವರ್ಷದ ವಿಶ್ವ
ಹಿಂದೂ ಮಹಾಗಣಪತಿ ಉತ್ಸವದ ಬೃಹತ್‌ ಶೋಭಾಯಾತ್ರೆ ಸಂದರ್ಭದಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಸಮಾಜದಲ್ಲಿರುವ ಎಲ್ಲರನ್ನೂ ಸಂಘಟಿಸುವ ನಿಟ್ಟಿನಲ್ಲಿ ಕೆಲಸ
ಮಾಡುತ್ತಿದೆ. ಬಾಲಗಂಗಾಧರನಾಥ್‌ ತಿಲಕ್‌ರವರು ಮೊದಲ ಬಾರಿ ಗಣಪತಿ ಉತ್ಸವದ ಮೂಲಕ ಹಿಂದೂ ಧರ್ಮಿಯರನ್ನು ಸಂಘಟಿಸುವ ಸಂದೇಶ ನೀಡಿ ವಿಶ್ವ ಹಿಂದೂ ಮಹಾಗಣಪತಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಅಂದಿನಿಂದ ದೇಶದೆಲ್ಲೆಡೆ ಗಣೇಶೋತ್ಸವ ನಡೆಯುತ್ತಿದೆ. ಹಿಂದೂ ಧರ್ಮದ ತತ್ವಾದರ್ಶಗಳನ್ನು ಜನರಿಗೆ ತಿಳಿಸುವುದು ಹಿಂದೂ ಸಂಘಟನೆಗಳ ಉದ್ದೇಶ ಎಂದರು.

ಚಿತ್ರದುರ್ಗ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯುವ ಹಿಂದೂ ಮಹಾಗಣಪತಿ ಉತ್ಸವ ದೇಶದ ಗಮನ ಸೆಳೆಯುತ್ತಿದೆ. ಹಾಗಾಗಿ ಹಿಂದೂಗಳನ್ನು ಸಂಘಟಿಸುವ ಮೂಲಕ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರೋಪಾಯ
ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ ಕಾರ್ಯದರ್ಶಿ ಷಡಕ್ಷರಪ್ಪ, ಚಿತ್ರದುರ್ಗ ಭಜರಂಗದಳದ ಮುಖಂಡ ಬಾಬಣ್ಣ, ತಾಲೂಕು ಅಧ್ಯಕ್ಷ ಉಮೇಶ್‌, ಶಾಸಕ ಎಂ. ಚಂದ್ರಪ್ಪ ಅವರ ಪತ್ನಿ ಚಂದ್ರಮ್ಮ, ಬಿಜೆಪಿ ಮುಖಂಡ ರಘುಚಂದನ್‌, ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

Advertisement

ಬೃಹತ್‌ ಶೋಭಾಯಾತ್ರೆ: ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಮಹಾಗಣಪತಿಯ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಬೃಹತ್‌ ಶೋಭಾಯಾತ್ರೆ ಆರಂಭವಾಯಿತು. ಟೋಲ್‌ಗೇಟ್‌ನಿಂದ ಆರಂಭವಾದ ಶೋಭಾಯಾತ್ರೆ, ಚಿತ್ರದುರ್ಗ-ಶಿವಮೊಗ್ಗ ರಸ್ತೆಯಲ್ಲಿ ಸಾಗಿತು. ಗಣಪತಿ ಸರ್ಕಲ್‌, ಬಸ್‌ ನಿಲ್ದಾಣ, ಸರಕಾರಿ ಪ್ರೌಢಶಾಲೆ, ಕೆಇಬಿ ಕಚೇರಿ, ಪೊಲೀಸ್‌ ವಸತಿಗೃಹ, ತಾಲೂಕು ಪಂಚಾಯತ್‌, ಬಸವಾ ಲೇಔಟ್‌ವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿ ಮಹಿಳೆಯರು ಹಾಗೂ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಪಟ್ಟಣದ ಪ್ರವಾಸಿ ಮಂದಿರ ರಸ್ತೆಯಲ್ಲಿ ಶೋಭಾಯಾತ್ರೆ ಸಾಗುತ್ತಿದ್ದಾಗ ದಿಢೀರ್‌ ಪ್ರತಿಭಟನೆ ಆರಂಭಿಸಿದ ಮಹಿಳೆಯರು ಹಾಗೂ ಬಾಲಕಿಯರು, ಪ್ರತ್ಯೇಕ ಡಿಜೆ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿದರು. ಪಟ್ಟಣದ ಅಂಗಡಿಗಳ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಮಜ್ಜಿಗೆ, ತಂಪು ಪಾನೀಯ ವ್ಯವಸ್ಥೆ ಇತ್ತು. ಶೋಭಾಯಾತ್ರೆ ಹಿನ್ನಲೆಯಲ್ಲಿ ಬಸ್‌ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಶಿವಮೊಗ್ಗ, ಚಿತ್ರದುರ್ಗ, ಹೊಸದುರ್ಗ, ದಾವಣಗೆರೆಗೆ ತೆರಳುವ ಪ್ರಯಾಣಿಕರು ಪರದಾಡಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next