Advertisement

ಸಾಹಿತ್ಯಕ್ಕಿಂತ ಮಾನವೀಯತೆ ದೊಡ್ಡದು

09:48 AM Jun 30, 2019 | Vishnu Das |

ಆಸ್ಟಿಯೋ ಜೆನಿಸಿಸ್‌ ಇಂಪರ್‌ಪೆಕ್ಟಾ ಎಂಬ ಅತಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆಯಂತಿದ್ದರು. ಬಾಲ್ಯದಿಂದ ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲಾಗದ ಸ್ಥಿತಿ. ತನ್ನ ಈ ಸ್ಥಾವರಾವಸ್ಥೆಯಲ್ಲೇ ಕವಿತೆಯನ್ನು ಹುಟ್ಟುಹಾಕಿ, ನಾಡಿನಾದ್ಯಂತ ತನ್ನ ಭಾವಗಳು ಜಂಗಮ ಹೊರಡುವುದನ್ನು ಕಂಡು ಹಿಗ್ಗುತ್ತಿದ್ದರು. ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಉರ್ದು ಭಾಷೆಗಳಲ್ಲಿ ಹಿಡಿತ ಸಾಧಿಸಿದ್ದ ಇವರು, 9 ಪುಸ್ತಕಗಳನ್ನು ಬರೆದಿದ್ದರು. ನಮ್ಮೆಲ್ಲರ ನಲ್ಮೆಯ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅವರ ಸ್ನೇಹಿತರೂ ಹೌದು. ಇತ್ತೀಚೆಗೆ ರಮೇಶ್‌, ನಾಡನ್ನು ಅಗಲಿದರು. ಕಳೆದವಾರ ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವರ ಕೃತಿ ಬಿಡುಗಡೆ ಸಂದರ್ಭದಲ್ಲಿ ಕಾಯ್ಕಿಣಿ ಅವರು ಮಾಡಿದ ಭಾಷಣದ ಆಯ್ದ ಭಾಗ ಇಲ್ಲಿದೆ…

Advertisement

ಗಾಯಕಿ ಶ್ರೇಯಾ ಘೋಷಾಲ್‌ ಅಂದರೆ ರಮೇಶರಿಗೆ ಅತೀವ ಪ್ರೀತಿ. ಅವಳ ಮದುವೆಯ ದಿನ ಬಹಳ ಬೇಜಾರಲ್ಲಿ ನಂಗೆ ಮೆಸೇಜ್‌ ಮಾಡಿದ್ದರು! ಒಂದಲ್ಲಾ  ಒಂದು ದಿನ ತಮ್ಮ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಬೇಕು ಎಂಬ ಕನಸು ಕಂಡಿದ್ದರು.

ಒಂದು ಕಾಲದಲ್ಲಿ ಧಾರವಾಡದಲ್ಲಿ ಕಲ್ಲೆಸೆದರೆ ಕವಿ ಅಥವಾ ಸಂಗೀತಗಾರನ ತಲೆ ಮೇಲೆ ಬೀಳುತ್ತದೆ ಎಂಬ ಮಾತಿತ್ತು. ಈಗ ಶಿರಸಿ ಅಂಥ ವೈಚಾರಿಕರ ನೆಲವಾಗಿದೆ. ಇಲ್ಲಿ ಕಲ್ಲೆಸೆದರೆ ಕವಿಯೋ, ಸಾಹಿತಿಯೋ ಅಥವಾ ಪತ್ರಕರ್ತನದೋ ತಲೆಮೇಲೆ ಬೀಳುವುದು ಪಕ್ಕಾ. ಅದರಲ್ಲೂ ಕವಿಯ ತಲೆಮೇಲೆ ಕಲ್ಲು ಬಿದ್ದರಂತೂ ಗೊತ್ತಾಗೇ ಗೊತ್ತಾಗುತ್ತೆ, ಯಾಕೆಂದ್ರೆ ಅವನಿಗೆ ತಲೆ ಇರುತ್ತೆ!

ಮುಷ್ಟಿ ಗಾತ್ರದ ಹೃದಯದಲ್ಲಿ ಇಡೀ ವಿಶ್ವವೇ ಹಿಡಿಯುತ್ತದೆ. ನಾವು ವಿನಾಕಾರಣ ಸಂಗತಿಗಳಿಗೆ ಬಾಗಿಲು ಮುಚ್ಚಿಕೊಂಡುಬಿಡುತ್ತೇವೆ. ರಮೇಶ್‌… ಹೆಗಡೆಯ ಹೃದಯದಲ್ಲಿ ಎಲ್ಲರಿಗೂ ಜಾಗವಿತ್ತು. ರಮೇಶರಿಗೆ ಬೇರೆ ಬೇರೆ ಕೆಲಸ ಮಾಡುವ ಹಲವು ಜನ ರಕ್ಷಣೆಯಾಗಿದ್ರು. ಮೆಕಾನಿಕ್‌ನವ, ಸೈಕಲ್‌ ರಿಪೇರಿಯವ, ಸಾಹಿತ್ಯ ಅಂದರೆ ಏನಂತಲೇ ಗೊತ್ತಿರದವರಿಗೂ ರಮೇಶ ಅಂದ್ರೆ ತುಂಬಾ ಪ್ರೀತಿಯಿತ್ತು. ಜನರ ಮಾನವೀಯತೆ ಸಾಹಿತ್ಯಕ್ಕಿಂತ ಬಹಳ ದೊಡ್ಡದು!

ಅನಾಮಿಕ ವೈದ್ಯನೊಬ್ಬ ಅನಾಮಿಕ ರೋಗಿಯನ್ನು ಉಳಿಸುವಷ್ಟು ದೊಡ್ಡ ಅಧ್ಯಾತ್ಮ ಬೇರೆ ಯಾವುದೂ ಇಲ್ಲ. ಚಿಕಿತ್ಸೆ ನೀಡುವ ವೈದ್ಯರೆಲ್ಲ ರಮೇಶರ ಗೆಳೆಯರಾಗಿಬಿಡುತ್ತಿದ್ದರು!
ಕೇಳುಗರಿಗಿಂತ ಹೆಚ್ಚು ಹಾಡುಗಾರರು, ನೋಡುಗರಿಗಿಂತ ಹೆಚ್ಚು ಸಿನಿಮಾ ಮಾಡುವವರು, ಓದುವವರಿಗಿಂತ ಹೆಚ್ಚು ಕವಿಗಳು ಇರುವ ಕಾಲ ಇದು! ಬಯಲಿನಲ್ಲಿ ಆಡಲು ಆಗದ ರಮೇಶ್‌, ಫೇಸ್‌ಬುಕ್‌ನಲ್ಲಿ ಕವಿತೆ ಪೋಸ್ಟ್‌ ಮಾಡುವ ಆಟ ಆಡುತ್ತಿದ್ದರು!
ಗಾಯಕಿ ಶ್ರೇಯಾ ಘೋಷಾಲ್‌ ಅಂದರೆ ರಮೇಶರಿಗೆ ಅತೀವ ಪ್ರೀತಿ. ಅವಳ ಮದುವೆಯ ದಿನ ಬಹಳ ಬೇಜಾರಲ್ಲಿ ನಂಗೆ ಮೆಸೇಜ್‌ ಮಾಡಿದ್ದರು! ಒಂದಲ್ಲಾ ಒಂದು ದಿನ ತಮ್ಮ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಬೇಕು ಎಂಬ ಕನಸು ಕಂಡಿದ್ದರು.

Advertisement

ಹಿತೈಷಿಯೊಬ್ಬರು ಸ್ಟೀಫ‌ನ್‌ ಹಾಕಿಂಗ್‌ ಬಳಸುತ್ತಿದ್ದ ಯೋಚನೆಯನ್ನೂ ಅಕ್ಷರ ರೂಪಕ್ಕಿಳಿಸುವ ಅತ್ಯಾಧುನಿಕ ಯಂತ್ರವನ್ನು ರಮೇಶನಿಗೆ ಕೊಡಲು ಮುಂದಾಗಿದ್ದರಂತೆ. ಆದರೆ, ಅದನ್ನೆಲ್ಲ ತೆಗೆದುಕೊಂಡು ಏನು ಮಾಡುವುದು ಎಂದು ರಮೇಶ ಚಿಂತಿಸಿದ. ಆ ಯಂತ್ರಕ್ಕೆ ತಗಲುವಷ್ಟೇ ಹಣ ಕೇಳಬೇಕೆಂದುಕೊಂಡರೂ “ಕೊಡುತ್ತಾರೆ ಎಂದು ತೆಗೆದುಕೊಳ್ಳುವುದಲ್ಲ’ ಎಂಬ ಪ್ರಜ್ಞೆ ರಮೇಶರಿಗಿತ್ತು.

“ಅವಸ್ಥೆ’ ಕಾದಂಬರಿಯಲ್ಲಿರುವಂತೆ, ಕಾಲು ಇಲ್ಲದವನೊಬ್ಬ ಈಜುವ ಕನಸು ಕಾಣುವಂತೆ, ಕಲ್ಪಿತ ಲೋಕವನ್ನೇ ನಿಜ ಮಾಡಿಕೊಂಡು ಸೃಷ್ಟಿಸಿಕೊಂಡು ಬರೆಯುವುದು. ಮಲಗಿದಲ್ಲೆ ಪರ್ವತ, ಜಲಪಾತ, ನಗರ  ವಿದೇಶಗಳನ್ನು ಕಲ್ಪಿಸಿ ಬರೆಯುವ ರಮೇಶರ ಕಲ್ಪನೆಯ ಜಗತ್ತು ಎಷ್ಟೆಲ್ಲ ಸುಂದರವಿದ್ದಿರಬಹುದು!

ನನ್ನ ಅಪ್ಪ ಗೌರೀಶ ಕಾಯ್ಕಿಣಿಯವರು ಎಲ್ಲರ ಪುಸ್ತಕಗಳಿಗೂ ಮುನ್ನುಡಿ ಬರೆದುಕೊಡುತ್ತಿದ್ದರು. ನೀವು ಮುನ್ನುಡಿ ಬರೆದು, ಪುಸ್ತಕ ಪ್ರಕಟಿಸಲು ಕವಿಗಳಿಗೆ ಪ್ರೋತ್ಸಾಹ ಕೊಟ್ಟು ಹಾಳು ಮಾಡ್ತೀರಿ ಅಂದ್ರೆ “ಯಾವುದೇ ವ್ಯಕ್ತಿ ಕತೆ  ಕವಿತೆ ಬರೀತಿದ್ರೆ ಅಷ್ಟರಮಟ್ಟಿಗೆ ಜಗತ್ತು ಅವನಿಂದ ಸುರಕ್ಷಿತವಾಗಿರುತ್ತೆ. ಕವಿಯಿಂದ ಜಗತ್ತಿಗೆ ಬೇರೆ ಹಾನಿಯಿಲ್ಲ !’ ಎಂದು ನಗುತ್ತಿದ್ದರು.

ರಮೇಶ್‌ ಚಿಕ್ಕವರಿ¨ªಾಗ ಸರಿಯಾಗಿಯೇ ಇದ್ರು. ಆಮೇಲೆ ದೇಹ ಬಯಸಿದ ದಾರಿಯಲ್ಲಿ ಜತೆಯಾಗಲಿಲ್ಲ. ರಮೇಶ್‌, ಅದಕ್ಕಾಗಿ ಕೊರಗಲಿಲ್ಲ. ಅವರ ದೈಹಿಕ ನ್ಯೂನ್ಯತೆ ಅವರಿಗೆ ಕಾವ್ಯದ ವಸ್ತುವೇ ಆಗಲಿಲ್ಲ. ನಾಳೆಯ ಬಹುದೊಡ್ಡ ನಂಬಿಕೆಯಲ್ಲಿ ನಾವು ಬದುಕುತ್ತೇವೆ. ಆದರೆ, ರಮೇಶರ ಮನೆಯಲ್ಲಿ ನಾಳೆ ಏನು ಅನ್ನೋದು ಗೊತ್ತಿಲ್ಲದ ಪರಿಸ್ಥಿತಿ. ಎಲ್ಲಾ ಇದ್ದವರು ಇಲ್ಲದ್ದನ್ನ ಊಹಿಸಿಕೊಂಡು ಭಯಪಡುವ ಕಾಲದಲ್ಲಿ, ಜೀವಚೈತನ್ಯದಿಂದ ಬದುಕಿದ ರಮೇಶ್‌ ನಮಗೆ ಸ್ಫೂರ್ತಿಗೀತ!

ಸಮನ್ವಯ: ಗುರುಗಣೇಶ ಭಟ್‌ ಡಬ್ಗುಳಿ

Advertisement

Udayavani is now on Telegram. Click here to join our channel and stay updated with the latest news.

Next