ಕೊಪ್ಪಳ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆಯಿಂದ ಅತಂತ್ರಗೊಂಡಿರುವ ಸಂತ್ರಸ್ತರಿಗೆ ಕೊಪ್ಪಳದ ಜನತೆ ನೆರವಿಗೆ ಮುಂದಾಗಿದ್ದಾರೆ. ನಗರದ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸಂಘ ಪರಿವಾರ, ನಿವಾಸಿಗಳು ಬಟ್ಟೆ, ಪದಾರ್ಥ, ಔಷಧಿ ಸಂಗ್ರಹಿಸಿ ಮಿಲಿ ಲೋಡ್‌ನಲ್ಲಿ ನೆರೆ ಪೀಡಿತ ಜಿಲ್ಲೆಗಳಿಗೆ ರವಾನಿಸಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಹಾಗೂ ನದಿಪಾತ್ರದ ನೀರು ಮನೆಗಳಿಗೆ ನುಗ್ಗಿ ಇಡೀ ಜನ ಜೀವನವನ್ನೇ ಅಸ್ತವ್ಯಸ್ಥವಾಗಿದೆ. ಮಳೆಯ ಅಬ್ಬರಕ್ಕೆ ಜನರ ಬದುಕೇ ನೀರಿನಲ್ಲಿ ಕೊಚ್ಚಿಕೊಂಡು ಹೋದಂತಾಗಿದೆ. ನದಿ ನೀರು ಇಡೀ ಊರಿಗೆ ನುಗ್ಗುತ್ತಿರುವುದರಿಂದ ಇದ್ದ ಮನೆಯನ್ನೂ ತೊರೆದು ಗುಡಿ, ಗುಂಡಾರ, ನಿರಾಶ್ರಿತ ಕೇಂದ್ರಗಳಲ್ಲಿ ನೆಲೆಸಿದ್ದಾರೆ.
ವಿದ್ಯಾರ್ಥಿಗಳಿಂದ ನೆರವು ಸಂಗ್ರಹ: ನೇರೆ ಸಂತ್ರಸ್ತರಿಗೆ ವಿವಿಧೆಡೆಯಿಂದ ಸದ್ದಿಲ್ಲದೇ ನೆರವಿನ ಸಂಗ್ರಹ ಆರಂಭವಾಗಿದೆ. ಕೊಪ್ಪಳದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ಮನೆಯಿಂದ ರೊಟ್ಟಿ, ಸಿಹಿ ಪದಾರ್ಥ, ಅಕ್ಕಿ, ಬಟ್ಟೆ, ಔಷಧಿಗಳನ್ನು ತಂದಿದ್ದು, ನೆರೆ ಸಂತ್ರಸ್ತರಿಗೆ ನೆರವಾಗಲು ಕೈ ಜೋಡಿಸಿದ್ದಾರೆ. ವಿದ್ಯಾರ್ಥಿಗಳಿಂದ 10 ಸಾವಿರ ರೊಟ್ಟಿ, 25 ಕೆಜಿಯ 55 ಪಾಕ್ಯೆಟ್ ಅಕ್ಕಿ, 35 ಬಿಸ್ಕೇಟ್ ಬಾಕ್ಸ್, 21 ಚೀಲ ಬಟ್ಟೆಗಳು, 4 ಚೀಲದ ಹಾಸಿಗೆ, ಹೊದಿಕೆ, 3 ಚೀಲದ ವಾಟರ್ ಪೌಚ್, 2 ಬಾಕ್ಸ್ ಪ್ರಥಮ ಚಿಕಿತ್ಸಾ ಔಷಧಿ, 5 ಬಾಕ್ಸ್ ಸಿಹಿ ಪದಾರ್ಥಗಳನ್ನು ಶಾಲೆಗೆ ತಂದು ಆಡಳಿತ ಮಂಡಳಿಗೆ ಅರ್ಪಿಸಿದ್ದಾರೆ. ಇದಕ್ಕೆ ಲಯನ್ಸ್ ಕ್ಲಬ್ ಸಹ ಕೈ ಜೋಡಿಸಿದೆ. ನೆರೆ ಸಂತ್ರಸ್ತರಿಗೆ ವಿದ್ಯಾರ್ಥಿಗಳೆ ಮುಂದಾಗಿದ್ದು ಎಲ್ಲೆಡೆ ಗಮನ ಸೆಳೆದಿದೆ.
ಶಾಲಾ ಆಡಳಿತ ಮಂಡಳಿ ಎಲ್ಲವನ್ನು ಸಂಗ್ರಹಿಸಿದ್ದು, ಹೊಳೆಯಾಲೂರು ಬಳಿ ನೆಲೆಸಿರುವ ಸಂತ್ರಸ್ತರಿಗೆ ಆಹಾರ, ಸಾಮಗ್ರಿಗಳನ್ನು ರವಾನಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿನ ತಹಶೀಲ್ದಾರ್ ಅವರ ಜೊತೆ ಸಂವಹನ ನಡೆಸಿದ್ದು, ತಕ್ಷಣವೇ ಸಂತ್ರಸ್ತರ ನೆರವಿಗೆ ಧಾವಿಸಲು ಮಿನಿ ಲೋಡ್‌ನ್ನು ಆಡಳಿತ ಮಂಡಳಿ ಸೇರಿದಂತೆ ಕ್ಲಬ್ ಸದಸ್ಯರು ವಾಹನವನ್ನು ಬೀಳ್ಕೊಟ್ಟರು.