ಹೀಗೆ ಹಾಸ್ಟೆಲಿನಲ್ಲಿ ಮೊಬೈಲ್ ಹಿಡ್ಕೊಂಡು ಕೂತಿರುವಾಗ ವಾಟ್ಸಾಪ್ ಗೆ ಒಂದು ಮೆಸೆಜ್ ಬಂತು. ಅದೇನೆಂದರೆ ಮೊನ್ನೆ ತಾನೆ ದೈತ್ಯ ಕಾಡಾನೆಯನ್ನು ಸೆರೆಹಿಡಿಯುವಾಗ ಅರ್ಜುನ ಎಂಬ ಆನೆ ತನ್ನ ಪ್ರಾಣವನ್ನು ಕಳೆದುಕೊಂಡ ವಿಚಾರ. ಆತನನ್ನು ಮಗನಂತೆ ಸಾಕಿ ಬೆಳೆಸಿದ ಮಾವುತನ ದುಃಖವನ್ನು ಕೇಳಿ ನನಗರಿವಿಲ್ಲದೆ ಕಣ್ಣಂಚಿಂದ ಕಂಬನಿ ಜಾರಿತು.
ಅದೊಂದು ಮುಗ್ಧ ಮೂಕ ಪ್ರಾಣಿ. ಮಾವುತನ ಮುದ್ದಿನ ಕೂಸು. ಅಪ್ಪ – ಮಗನಂತೆ ಜೀವನ ನಡೆಸುತ್ತಿದ್ದರು. ಮಾವುತನ ಆಜ್ಞೆಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ಅರ್ಜುನ, ರಾಮ ಲಕ್ಷ್ಮಣರಂತೆ ಇದ್ದರು. ಅದ್ಯಾರ ದೃಷ್ಟಿ ಬಿತ್ತೋ, ಅರ್ಜುನ ಮಾವುತನ ಮಡಿಲು ತ್ಯಜಿಸಿ ಪರಶಿವನ ಪಾದ ಸೇರಿದ.
ಎಂಟು ಬಾರಿ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿಯನ್ನು ಹೆಗಲ ಮೇಲೆ ಹೊತ್ತು ರಾಜಗಾಂಭೀರ್ಯದಿಂದ ರಥಬೀದಿಯಲ್ಲಿ ಸಾಗುತ್ತಿದ್ದ ಅರ್ಜುನನನ್ನು ನೋಡಲು ಎರಡು ಕಣ್ಣುಗಳು ಸಾಲುತಿರಲಿಲ್ಲ. 64 ವರ್ಷ ದಾಟಿದ ಅರ್ಜುನ ದಸರಾ ಅಂಬಾರಿ ಹೊರುವುದು ಅಸಾಧ್ಯ ಎಂದು ತಿಳಿದ ಮಾವುತ ವಿನು ಆತನಿಗೆ ನಿವೃತ್ತಿ ನೀಡಿದ್ದ. ಈ ಗೌರವದಿಂದ ನಿವೃತ್ತಿ ಹೊಂದಿ, ಕಾಡಿನಲ್ಲಿ ಸಂತಸದಿಂದ ದಿನ ಕಳೆಯುತ್ತಿದ್ದ ಅರ್ಜುನ. ಇನ್ನೇನು ಬಳ್ಳೆ ಸಾಕಾನೆ ಕ್ಯಾಂಪಿಗೆ ತೆರಳಲು ಕಾಯುತ್ತಿದ್ದ. ಆದರೆ ಅದ್ಯಾವುದೋ ಕಾರಣಕ್ಕೆ ಆತನನ್ನು ಕ್ಯಾಂಪಿಗೆ ಕಳುಹಿಸದೆ ಅಲ್ಲೇ ಉಳಿಸಿಕೊಳ್ಳಲಾಗಿತ್ತು.
ಅನಂತರ ಸಕಲೇಶಪುರದಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವ ಸಲುವಾಗಿ ಅರ್ಜುನನ್ನು ಬಳಸಿಕೊಳ್ಳಲಾಯಿತು. ತನ್ನಿಂದ ಅಸಾಧ್ಯ ಎಂದು ನಿವೃತ್ತಿಯನ್ನು ಘೋಷಿಸಿದ ಅರ್ಜುನನಿಗೆ ಕಾಡಾನೆಯನ್ನು ಸೆರೆಹಿಡಿಯುವ ಹೊರೆಯನ್ನು ನೀಡಲಾಗಿತ್ತು. ತನ್ನ ಶಕ್ತಿಗೂ ಮೀರಿ ಹೊರೆ ಹೊತ್ತು. ಕೊನೆಯ ಕ್ಷಣದವರೆಗೂ ಹೋರಾಟ ಮಾಡಿ ಅಗಾಧ ನೋವನ್ನಾನುಭವಿಸಿ ಪ್ರಾಣಬಿಟ್ಟ ಸಂಗತಿಯು ಎಲ್ಲರ ಕರುಳು ಕಿವುಚುವಂತೆ ಮಾಡುತ್ತದೆ.
ಇಂತಹ ಅಸಹಾಯಕ ಸಾವು ಕಂಡ ಅರ್ಜುನ ಖಂಡಿತಕ್ಕೂ ಅಸಹಾಯಕನಲ್ಲ, ಅಮಾಯಕನೂ ಅಲ್ಲ. ಎಂಥ ಪರಿಸ್ಥಿತಿಯನ್ನೂ ಎದುರಿಸಬಲ್ಲ ತಾಕತ್ತಿನ ಬಲಾಡ್ಯನೂ, ಧೈರ್ಯಶಾಲಿಯಾಗಿದ್ದ ಅರ್ಜುನ 5,800 ಕೆಜಿ ತೂಕ ಹೊಂದಿದ್ದ ಮತ್ತು ಅರಣ್ಯ ಇಲಾಖೆಯ ಹಲವಾರು ಕಾರ್ಯಾಚರಣೆಯಲ್ಲಿ ಸಾಕಷ್ಟು ಪುಂಡಾನೆಗಳನ್ನು ಸೆರೆಹಿಡಿಯುವ ಕೆಲಸ ಕೂಡ ಮಾಡಿದ್ದ. ಆದರೆ ಈ ಬಾರಿ ಹುತಾತ್ಮ ಪಟ್ಟದೊಂದಿಗೆ ಅರ್ಜುನನ ಹೆಸರು ಅರಣ್ಯ ಇಲಾಖೆಯಲ್ಲಿ ಅಮರವಾಯಿತು ಕನ್ನಡಿಗರ ಎದೆಯಲ್ಲಿ ಅಜರಾಮರವಾಯಿತು.
ಮಾತು ಬಾರದ ಮುಗ್ಧ ಜೀವಿಗೆ ಸಹಿಸಲಾರದಷ್ಟು ನೋವನ್ನು ನೀಡಿದ್ದು ಮಾನವನ ಸ್ವಾರ್ಥವಲ್ಲವೇ.? ಮೂಕಪ್ರಾಣಿ ಎಂಬ ನಿರ್ಲಕ್ಷÂಕ್ಕೋ, ಮೂರ್ಖತನಕ್ಕೋ ಏನೂ ಅರಿಯದ ಮುದ್ದುಕೂಸು ಅರ್ಜುನ ಇಹಲೋಕ ತ್ಯಜಿಸಿದ. ದಿನೇ ದಿನೇ ಸಮಾಜದಲ್ಲಿ ಮಾನವೀಯತೆ ಮರೀಚಿಕೆಯಾಗುತ್ತಿರುವುದಕ್ಕೆ ಇದೇ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಮತ್ತೇ ಹುಟ್ಟಿ ಬಾ ಅರ್ಜುನ….
-ಶಮಿತಾ
ವಿವೇಕಾನಂದ ಕಾಲೇಜು ಪುತ್ತೂರು