Advertisement

ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಧರಣಿ

12:54 PM Jul 27, 2019 | Naveen |

ಹುಮನಾಬಾದ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ಕಾರ್ಮಿಕ ನಿರೀಕ್ಷಕರ ತಾಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡೆಸಲಾಯಿತು.

Advertisement

ಈ ವೇಳೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿ, ಎರಡು ವಾರದಲ್ಲಿ ಖಾತೆಗೆ ಹಣ ಜಮಾ ಆಗದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಈ ನಿಟ್ಟಿನಲ್ಲಿ ತಾಲೂಕು ಕಾರ್ಮಿಕ ನಿರೀಕ್ಷಕರು ಅರ್ಜಿದಾರರ ಅಗತ್ಯ ದಾಖಲೆಗಳನ್ನು ಅನಗತ್ಯ ವಿಳಂಬಿಸದೇ ಶೀಘ್ರ ಪರಿಶೀಲಿಸಿ, ಮೇಲಧಿಕಾರಿಗಳಿಗೆ ತಲುಪಿಸಬೇಕು ಎಂದು ಎಚ್ಚರಿಸಿದರು.

2017-18ನೇ ಸಾಲಿನ ವಿವಾಹ ಸಹಾಯಧನ ಮತ್ತು ವಿದ್ಯಾರ್ಥಿ ವೇತನ ನೀಡಲು ಅನಗತ್ಯ ವಿಳಂಬಿಸದೇ ಶೀಘ್ರ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಬೇಕು. ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿರುವಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡದಿರುವ ಕಾರಣ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಕಾರ್ಮಿಕರಿಗೆ ಸಮಗ್ರವಾಗಿ ಪರಿಚಯಿಸುವ ಕೆಲಸವಾಗಬೇಕು ಎಂದರು. 2019ನೇ ಸಾಲಿನ ವಿದ್ಯಾರ್ಥಿ ವೇತನ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಈಗ ನಿಗದಿಪಡಿಸಿದ ದಿನಾಂಕವನ್ನು ಸೆಪ್ಟೆಂಬರ್‌ ವರೆಗೆ ವಿಸ್ತರಿಸಬೇಕು. ಹೊಸ ಗುರುತಿನ ಚೀಟಿ ಅರ್ಜಿ ಸಲ್ಲಿಸಲು ತಾಲೂಕು ಕಚೇರಿಯಲ್ಲೇ ಆನ್‌ಲೈನ್‌ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಭಾಲ್ಕಿ, ಬೀದರ್‌, ಔರಾದ ಮತ್ತು ಬಸವಕಲ್ಯಾಣ ಫಲಾನುಭವಿಗಳಿಗೆ ಎಲ್ಲವೂ ಸಕಾಲಕ್ಕೆ ತಲುಪುತ್ತಿವೆ. ಆದರೆ ಹುಮನಾಬಾದನಲ್ಲಿ ಮಾತ್ರ ವಿಳಂಬವಾಗುತ್ತಿವುದಕ್ಕೆ ಕಾರಣವೇನು. ಅದನ್ನು ತಕ್ಷಣ ಬಗೆಹರಿಸುವ ಮೂಲಕ ಅನಗತ್ಯ ನಿತ್ಯ ಕಚೇರಿ ಅಲೆಯುವುದನ್ನು ತಪ್ಪಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಹಂಸರಾಜ್‌ ಆಗ್ರಹಿಸಿ, ಕಾರ್ಮಿಕ ನಿರೀಕ್ಷಕಿ ಕವಿತಾ ಜೆ.ಹೊನ್ನಾಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಸಾಮುದ್ದೀನ್‌ ಮೀರಸಾಬ್‌ ಓತಗಿ ಮಾತನಾಡಿ, ಕಾರ್ಮಿಕರು ಸಹಾಯ ಧನಕ್ಕಾಗಿ ಪರದಾಡುತ್ತಿದ್ದಾರೆ. ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಸಂತೋಷಕರ್‌, ಸರಸ್ವತಿ ಬನ್ನಿ, ಉಪಾಧ್ಯಕ್ಷ ಕುಶಾಲ ಹುಣಸೆ, ಗೌಸೋದ್ದಿನ್‌ ವಾಂಜ್ರಿ, ನಾಗನಾಥ ಘಾಟಬೋರಾಳ, ಜೀವನ ಧುಮ್ಮನಸೂರ್‌, ಶರಣಪ್ಪ ಘಾಟಬೋರಾಳ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಹಳೆ ತಹಶೀಲ್ದಾರ್‌ ಕಚೇರಿ ಕಟ್ಟಡದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next