ಹುಮನಾಬಾದ: ಯಾವುದೇ ತಾಲೂಕಿನಲ್ಲಿ ಇಲ್ಲದ ಹೈಟೆಕ್ ವಿವಿಐಪಿ ಅತಿಥಿ ಗೃಹ ಹುಮನಾಬಾದ ಪಟ್ಟಣದಲ್ಲಿ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ, ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಲೋಕೋಪಯೋಗಿ ಇಲಾಖೆಯ ವಿವಿಐಪಿ ಅತಿಥಿ ಗೃಹ ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಈ ಕಾರ್ಯಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ನಿರ್ಧರಿಸಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಸಚಿವ ರೇವಣ್ಣ ಅವರನ್ನು ಭೇಟಿ ಮಾಡಿ ಹುಮನಾಬಾದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಮಧ್ಯ ಇದ್ದು, ಇಲ್ಲಿ ವಿವಿಐಪಿ ಅತಿಥಿ ಗೃಹ ಅವಶ್ಯಕತೆ ಕುರಿತು ಮನವರಿಕೆ ಮಾಡಲಾಗಿತ್ತು. ಅಲ್ಲದೆ, ಅನುದಾನ ಬಿಡುಗಡೆಯಾಗುವ ಹಂತದಲ್ಲಿ ಸರ್ಕಾರ ಬದಲಾವಣೆಯಾಗಿ ವಿಳಂಬವಾಗಿದೆ. ಹೊಸ ಸರ್ಕಾರ ಬಂದ ನಂತರ ಕೂಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈಗಿನ ಲೋಕೋಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ಹಳ್ಳಿಖೇಡ(ಬಿ)ಗೆ ಅನುದಾನ: ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣ ಇದೀಗ ಪುರಸಭೆಯಾಗಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಹಳ್ಳಿಕೇಡ (ಬಿ) ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 4.43 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಆಸ್ಪತ್ರೆಯ ಹೊಸ ಕಟ್ಟ ನಿರ್ಮಾಣ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಅಲ್ಲದೆ, 80 ಲಕ್ಷ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಕಾರ್ಯಕ್ಕೂ ಅನುದಾನ ಬಿಡುಗಡೆಗೊಂಡಿದೆ ಎಂದರು.
ವಿರೋಧ ಪಕ್ಷದವರು ಕಡಿಮೆ ವೆಚ್ಚದ ಕೆಲಸಕ್ಕೆ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ಮುಖಂಡರು ಮಾತ್ರ ಮಾಡುವ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಸುವ, ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಹುಮನಾಬಾದ ಕ್ಷೇತ್ರದ 7 ಜನರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇವರಂತೆ ಇತರರು ಕೂಡ ಸಾಧನೆ ಮಾಡಿ ಗುರಿ ಮುಟ್ಟಬೇಕು ಎಂದರು. ಈ ವೇಳೆ ಎಂಎಲ್‌ಸಿ ಡಾ| ಚಂದ್ರಶೇಖರ ಪಾಟೀಲ, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಯುವ ಮುಖಂಡ ಅಭಿಷೇಕ್ ಪಾಟೀಲ, ಡಾ| ಪ್ರಕಾಶ ಪಾಟೀಲ, ಕಂಟೆಪ್ಪ ದಾನ, ಸುಗಂಧಾ, ಎಪಿಎಂಸಿ ಅಧ್ಯಕ್ಷ ಭದ್ರೇಶ ಪಾಟೀಲ, ಪ್ರಥಮ ದರ್ಜೆ ಗುತ್ತೆದಾರ ಗುರುನಾಥ ಕೊಳ್ಳೂರ್, ಸಚಿನ್ ಕೊಳ್ಳೂರ್, ಎಇಇ ಶಶಿಧರ ಪಾಟೀಲ, ಇಂಜಿನಿಯರ್ ರಾಜಕುಮಾರ ಕಲಬುರಗಿ, ಪುರಸಭೆ ಸದಸ್ಯ ಅಫ್ಸರ್ ಮಿಯ್ನಾ, ಕಾಳಪ್ಪ ಪಾಟೀಲ ಇದ್ದರು.