Advertisement

ಸರ್ಕಾರಿ ಯೋಜನೆ-ಶುಚಿತ್ವ ಜನಜಾಗೃತಿ

11:47 AM Jan 10, 2020 | Naveen |

ಬೀದರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮುಂದುವರಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಇತ್ತೀಚೆಗೆ ಹುಮನಾಬಾದ ತಾಲೂಕಿನ ಮದರಗಾಂವ್‌ನಲ್ಲಿ ನಡೆಯಿತು.

Advertisement

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೀದಿನಾಟಕ ನಡೆದ ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗ್ರಾಮ ವಾಸ್ತವ್ಯ ಬ್ಯಾನರಡಿಯಲ್ಲಿ ಗ್ರಾಮದಲ್ಲಿ ಜಾಥಾ ನಡೆಸಿದರು. “ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ’ ಎನ್ನುವ ನಾನಾ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.

“ಕೇಳ್ರಪ್ಪೋ ಕೇಳಿ.. ಕೇಳ್ರಮ್ಮೋ ಕೇಳಿ.. ನಾವು ಬೀದರನಿಂದ ನಿಮ್ಮೂರಿಗೆ ಬಂದೀವಿ.. ಸರ್ಕಾರದ ಯೋಜನೆಗಳ ಮಾಹಿತಿ ಕೊಡ್ತೀವಿ.. ಸ್ವಚ್ಛತೆಯ ಬಗ್ಗೆ ತಿಳಸ್ತೀವಿ.. ಎಲ್ಲಾರೂ ಬಸವೇಶ್ವರ ದೇವರ ಕಟ್ಟಿ ಹತ್ತಿರ ಬರ್ರಿ..’ ಎಂದು ಕಲಾವಿದರು ಇದೆ ವೇಳೆ ಗ್ರಾಮಸ್ಥರಿಗೆ ಕಾರ್ಯಕ್ರಮದ ಬಗ್ಗೆ ಆಹ್ವಾನ ನೀಡಿದರು.

ಬಳಿಕ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಕಲಾ ತಂಡಗಳೊಂದಿಗೆ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದರು. ಶುಚಿತ್ವದ ಬಗ್ಗೆ ಗಮನ ಕೊಡಿ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ. ಸರ್ಕಾರವು ಜನಪರವಾಗಿ ಹತ್ತಾರು ಯೋಜನೆಗಳನ್ನು ರೂಪಿಸುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿ ತಿಂಗಳು ಸರ್ಕಾರದಿಂದ 1,000 ರೂ. ಮಾಸಾಶನ ಸಿಗುತ್ತಿದೆ. ನನ್ನ ಸೊಸೆಗೂ ಸಹಾಯಧನ ಸಿಗುತ್ತಿದೆ. ಇದರಿಂದ ನಮಗೆ ಅನುಕೂಲವಾಗಿದೆ. ಸರ್ಕಾರಕ್ಕೆ ಧನ್ಯವಾದಗಳು ಎಂದು ವಯೋವೃದ್ಧೆ ಗಂಗಮ್ಮ ನಾಗಶೆಟ್ಟೆನೋರ್‌ ತಿಳಿಸಿದರು.

Advertisement

ಸರ್ಕಾರಿ ಶಾಲೆಯಲ್ಲೇ ಓದಿಸುವೆ: ಸರ್ಕಾರವು ಸಾಕಷ್ಟು ಸೌಕರ್ಯ ನೀಡುತ್ತಿದ್ದು, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ವಾರ್ತಾಧಿಕಾರಿಯ ಮನವಿಗೆ ಸ್ಪಂದಿಸಿದ ಅಜ್ಜಿ ಮುಕ್ತಾಬಾಯಿ ಎಂಬುವವರು, “ನೋಡ್ರಿ ಸಾಹೇಬ್ರ.. ಸಹನಾ.. ಪೂಜಾ.. ಶಂಕ್ರು ಇವರು ನನ್ನ ಮೊಮ್ಮಕ್ಕಳು ಎಂದು ಪರಿಚಯಿಸಿ, ಇವರನ್ನು ಸರ್ಕಾರಿ ಶಾಲೆಗೆ ಹಾಕೀನಿ. ಮುಂದೆಯೂ ಸರ್ಕಾರಿ ಶಾಲೆಗಳಲ್ಲೇ ಓದಿಸುವೆ’ ಎಂದು ವಚನ ನೀಡಿದಳು.

ಗ್ರಾಮದಲ್ಲಿ ಸುತ್ತುವ ವೇಳೆ ಕೆಲ ಮನೆಗಳ ಶೌಚಾಲಯಗಳಲ್ಲಿ ಕುಳ್ಳು-ಕಟ್ಟಿಗೆಗಳನ್ನು ಶೇಖರಿಸಿರುವುದು ಕಂಡು ಬಂದಿತು. ಇದನ್ನು ಈ ಕೂಡಲೇ ತೆಗೆಯಿರಿ. ಶೌಚಾಲಯ ಬಳಸಿರಿ. ಬಯಲಿಗೆ ಹೋಗಬೇಡಿರಿ ಎಂದು ಜನತೆಗೆ ತಿಳಿ ಹೇಳಲಾಯಿತು. ನಂದೀಶ್ವರ ನಾಟ್ಯ ಸಂಘದ ಕಲಾವಿದರಾದ ದೇವಿದಾಸ ಚಿಮಕೋಡ್‌, ರಾಜೇಂದ್ರ ಸಿಂಧೆ, ವೀರಶೆಟ್ಟಿ ಶಿಂಧೆ, ಸಿದ್ದಲಿಂಗ ಸುಣಗಾರ್‌, ನಾಗಮ್ಮ ಅಲಿಯಂಬರ್‌, ಇಂದುಮತಿ ಗುಡ್ಡೆ, ಸೂರ್ಯಕಾಂತ ಶರಣಪ್ಪ ಹಾಗೂ ಇತರರು ಮತ್ತು ಮಹಿಳಾ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲಾವಿದರಾದ ವಿಶಾಲ್‌ ಶಿವರಾಜ ದೊಡ್ಡಮನಿ, ಶಶಿಕಲಾ ತಿಪ್ಪಣ್ಣಾ, ಶ್ಯಾಮವೆಲ್‌ ನಾಗೋರ್‌ ಅವರು ಬೀದಿನಾಟಕ ಮತ್ತು ಜನಜಾಗೃತಿ ಗೀತೆಗಳನ್ನು ಹೇಳುವ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.

ಜೊತೆಗೆ ಶೌಚಾಲಯ ಬಳಕೆ, ಬಾಲ್ಯ ವಿವಾಹ ತಡೆ, ನೀರಿನ ಸದ್ಬಳಕೆ, ಆರೋಗ್ಯ, ಮಿಶ್ರ ಬೆಳೆ ಸೇರಿದಂತೆ ಹಲಾವರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದರು.

ಗ್ರಾಪಂ ಕಟ್ಟಡದಲ್ಲಿ ವಾಸ್ತವ್ಯ: ಕಾರ್ಯಕ್ರಮದ ಬಳಿಕ ವಾರ್ತಾ ಧಿಕಾರಿ ಗವಿಸಿದ್ದಪ್ಪ, ಸಿನಿ ಚಾಲಕ ವಿಜಯಕೃಷ್ಣ ಸೋಲಪುರ, ವಾಹನ ಚಾಲಕ ಬಿಂದುಸಾರ ಧನ್ನೂರ್‌ ಹಾಗೂ ಕಲಾವಿದರೊಂದಿಗೆ ಗ್ರಾಪಂ ಸಭಾಂಗಣದಲ್ಲಿ ವಾಸ್ತವ್ಯ ಮಾಡಿದರು. ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯು ಪ್ರಕಟಿಸಿದ ದಿನ ನೂರು ಸಾಧನೆ ನೂರಾರು ಎನ್ನುವ ಪುಸ್ತಕವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಸರಸ್ವತಿ ಸುಭಾಷ, ಉಪಾಧ್ಯಕ್ಷ ಗೌತಮ ಮೋರೆ, ಸದಸ್ಯರಾದ ಶಿವಕುಮಾರ ಮಲಶೆಟ್ಟಿ, ಶ್ರೀದೇವಿ ಅರ್ಜುನ್‌, ರೇಖಾ ರಮೇಶ, ಮುಖಂಡರಾದ ಶ್ರೀಮಂತ ದಾಡಗಿ, ರಾಜಶೇಖರ ಪಾಟೀಲ, ಶ್ರೀಮಂತ ಮರ್ಕಲೆ, ಕಲ್ಲಪ್ಪ ಚಿದ್ರಿ ಭಾಗಿಯಾಗಿ ಮೆಚ್ಚುಗೆ
ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next