ಹುಮನಾಬಾದ: ವಿದ್ಯಾರ್ಥಿಗಳ ಶಿಷ್ಯವೇತನ ಬ್ಯಾಂಕ್ ಖಾತೆ ಜೊತೆಗೆ ಆಧಾರ್ ನೋಂದಣಿ ಕೇಂದ್ರದ ಕೊರತೆ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲಿ ಹೆಚ್ಚುವರಿ ಕೇಂದ್ರ ಆರಂಭಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಶುಕ್ರವಾರ ಅಂಚೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಾಗಿನಿಂದ ಶಾಲೆಗಳ ಶಿಕ್ಷಕರು, ಮಕ್ಕಳು ಮತ್ತು ಪಾಲಕರು ನಿತ್ಯ ಖಾಸಗಿ ಕಂಪ್ಯೂಟರ್ ಕೇಂದ್ರ, ಎಸ್‌ಬಿಐ ಮತ್ತು ಅಂಚೆ ಕಚೇರಿಗೆ ಅಲೆದಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಚೆ ಅಧಿಕಾರಿಗಳಿಗೆ ಅವರು ಈ ವಿಷಯ ತಿಳಿಸಿದರು.
ತಾಲೂಕಿನಲ್ಲಿ 5,430 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಬೇಕಿತ್ತು. ಆ ಪೈಕಿ ಈವರೆಗೆ 3,663 ಜೋಡಣೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. 1,767 ವಿದ್ಯಾರ್ಥಿಗಳ ಜೋಡಣೆ ಬಾಕಿ ಉಳಿದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಜಿಪಂ ಉಪಾಧ್ಯಕ್ಷರಿಗೆ ಮಾಹಿತಿ ನೀಡಿದರು.
10 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ನೋಂದಣಿಗೆ ಮಕ್ಕಳು ಕಡ್ಡಾಯವಾಗಿ ಹಾಜರ ಇರಬೇಕು. 10 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳ ನೋಂದಣಿಗೆ ಮಕ್ಕಳೂ ಬರುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಸಾಲು: ಪ್ರತಿನಿತ್ಯ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಿರುವ ಕಾರಣ ಮಕ್ಕಳ ಬೇಸರ ಕಳೆಯಲು ಕೆಲ ಶಿಕ್ಷಕರು ಮಕ್ಕಳನ್ನು ಅಂಚೆ ಕಚೇರಿ ಹಾಲ್ನಲ್ಲಿ ಕೂಡಿಸಿ ಪಾಠ-ಪ್ರವಚನ ಮಾಡಿದರು. ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಬಾಬುಮಿಯ್ಯ, ಬಿಆರ್‌ಸಿ ಶಿವಕುಮಾರ ಪಾರಶೆಟ್ಟಿ, ಸಿಆರ್‌ಪಿಗಳದ ಭೀಮಣ್ಣ ದೇವಣಿ, ಗೋರಖನಾಥ ದಾಡಗೆ ಹಂದಿಕೇರಾ ಮತ್ತು ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.