Advertisement

ಹುಮನಾಬಾದನಲ್ಲಿ ನೀರಿಗೆ ಹಾಹಾಕಾರ

11:02 AM Apr 10, 2019 | |

ಹುಮನಾಬಾದ: ವಾರದಿಂದ ನಗರದಲ್ಲಿ ನೀರು ಪೂರೈಕೆ ಆಗದಿರುವುದರಿಂದ ಪಟ್ಟಣದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹುಮನಾಬಾದ, ಹಳ್ಳಿಖೇಡ(ಬಿ) ಮತ್ತು ಚಿಟಗುಪ್ಪ ಪಟ್ಟಣ ಸೇರಿ ಒಟ್ಟು 14 ಗ್ರಾಮಗಳಿಗೆ ಪೂರೈಕೆ ಆಗುವ ಕಾರಂಜಾ ಜಲಾಶಯದಿಂದ ಸಕಾಲಕ್ಕೆ ಸಮರ್ಪಕ ಪೂರೈಕೆ ಆಗುತ್ತಿಲ್ಲ. 6 ತಿಂಗಳ ಹಿಂದೆ ಹುಡಗಿ ಸಮೀಪದ ಜಲ ಸಂಗ್ರಹ ಟ್ಯಾಂಕ್‌ ಬಳಿ ಮುಖ್ಯ ಪೈಪ್‌ ಒಡೆದಿದ್ದರಿಂದ ನಿತ್ಯ ಸಾವಿರಾರು ಲೀಟರ್‌ ನೀರು ನಾಲೆಯಲ್ಲಿ ವ್ಯರ್ಥ ಪೋಲಾಗಿ ನಾಲ್ಕೈದು ದಿನ ನೀರು ಪೂರೈಕೆ ಆಗಿರಲಿಲ್ಲ. ಆದರೆ ಈ ಬಾರಿ ಕಾರಂಜಾ ಹತ್ತಿರದ ಮುಖ್ಯ ಪೈಪ್‌ ಭಾರೀ ಪ್ರಮಾಣದಲ್ಲಿ ಒಡೆದ ಹಿನ್ನೆಲೆಯಲ್ಲಿ ನಗರದಲ್ಲಿ ವಾರದಿಂದ ನೀರು ಪೂರೈಕೆ ಇಲ್ಲದೇ ಸಾರ್ವಜನಿಕರು
ತೀವ್ರ ತೊಂದರೆಗೀಡಾಗಿದ್ದಾರೆ.

Advertisement

ಶಾಶ್ವತ ದುರುಸ್ತಿ ಯಾಕಿಲ್ಲ?: ಒಮ್ಮೆ ಕಾರಂಜಾ ಬಳಿ, ಮೊತ್ತೂಮ್ಮೆ ಸಿಂದಬಂದಗಿ ಬಳಿ, ಮಗದೊಮ್ಮೆ ಬೇನಚಿಂಚೋಳಿ ಆಗಾಗ ಹುಡಗಿ ಬಳಿ ಏಕಾ ಏಕಿ ಮುಖ್ಯ ಪೈಪ್‌ ಅದ್ಹೇಗೆ ಒಡೆದು ಹಾಳಾಗುತ್ತವೆ. ಕೆಟ್ಟಾಗ ಖಾಯಂ ದುರುಸ್ತಿ ಮಾಡಿಸಿದರೆ ಪದೆಪದೆ ಒಡೆದು ನೀರು ಪೋಲಾಗುವುದು ಮಾತ್ರವಲ್ಲದೇ ಸಾರ್ವಜನಿಕರು ಅನಗತ್ಯ ತೊಂದರೆ ಅನುಭವಿಸುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಖಾಯಂ ದುರುಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವನಿಕರ ಒತ್ತಾಸೆ.

ಟ್ಯಾಂಕರ್‌ ನೀರೆ ಗತಿ: ಬೇಸಿಗೆ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ನಿವಾಸಿಗಳು ವಾರಕಾಲ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳದ ಕಾರಣ ಅನಿವಾರ್ಯವಾಗಿ ಎರಡು ದಿನಕ್ಕೊಮ್ಮೆ 400ರೂ. ಕೊಟ್ಟು ಟ್ಯಾಂಕರ್‌ ನೀರು ಖರೀದಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಆನಂದ ನಾನಕೇರಿ ಹಾಗೂ ಗೋವಿಂದರೆಡ್ಡಿ ಅವರು.

ಉಳ್ಳವರಾದರೆ ಹೇಗೋ ಹಣ ತೆತ್ತು ಖರೀದಿಸುತ್ತಾರೆ. ಕೂಲಿ ಮಾಡಿ ಬದುಕುವ ನಮ್ಮಂಥವರ ಸ್ಥಿತಿ ಯಾರ ಮುಂದೆ ಹೇಳಿಕೊಳ್ಳಬೇಕು ಎನ್ನುತ್ತಾರೆ ಧನಗರ ಗಡ್ಡಾ, ಬುಡಬುಡಕಿ ಓಣಿ ನರಸಮ್ಮ ಮತ್ತು ಸುಶೀಲಾಬಾಯಿ. ಬಿಸಿಲು ಕಳೆದ ಮೇಲೆ ಕಿ.ಮೀ.ಗೂ ದೂರದಲ್ಲಿರುವ ಆರ್ಯ ಅವರ ತೋಟದ ಬಾವಿಗೆ ಮಕ್ಕಳೊಂದಿಗೆ
ತೆರಳಿ ನೀರು ತರಬೇಕಾದ ಅನಿವಾರ್ಯತೆ ಇದೆ ಎಂದು ಅವರು ವಿವರಿಸಿದರು. ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ)
ಪಟ್ಟಣ ಮಾತ್ರವಲ್ಲದೇ ತಾಲೂಕಿನ ವಿವಿಧ ಹಳ್ಳಿಗಳಲ್ಲೂ ಸಮಸ್ಯೆ ಗಂಭೀರ ಸ್ವರೂಪದಲ್ಲಿ ಇಲ್ಲದಿದ್ದರೂ ನೀರಿಗಾಗಿ ಇತರೆ ಕೆಲಸ ಬಿಟ್ಟು ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿವಿಧ ಗ್ರಾಮಗಳ ಜನ ಪ್ರತಿನಿತ್ಯ ಅಳಲು ತೋಡಿಕೊಳ್ಳುತ್ತಾರೆ.

ಖಾಸಗಿ ಬಾವಿ ನೀರು: ಈ ಮಧ್ಯ ತಾಲೂಕಿನ ಧುಮ್ಮನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಪ್ರಮಾಣ ಕುಸಿದ ಕಾರಣ ಗ್ರಾಮದ ಖಾಸಗಿ ವ್ಯಕ್ತಿ ಒಬ್ಬರಿಗೆ ಸೇರಿದ ಕೊಳವೆ ಬಾವಿ ನೀರನ್ನು ಗ್ರಾಮ ಪಂಚಾಯಿತಿ ಬಾವಿಗೆ ಸುರಿದು ಒವರ್‌ ಹೆಡ್‌ ಟ್ಯಾಂಕ್‌ ಮೂಲಕ ಗ್ರಾಮದ ನಿವಾಸಿಗಳಿಗೆ ಪೂರೈಸಲಾಗುತ್ತಿದೆ. ತಾಲೂಕಿನ ಇನ್ನೂ ಅನೇಕ ಗ್ರಾಮಗಳಲ್ಲಿ ಇಂಥ ಸಮಸ್ಯೆ ಇದೆ.
ಬಿಸಿಲಿನ ಬೇಗೆಯಿಂದ ಮನೆ ಬಿಟ್ಟು ಹೊರ ಬರುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ನಿತ್ಯ ಪ್ರತಿಯೊಂದು ಕೆಲಸಕ್ಕೂ ಅವಶ್ಯವಿರುವ ನೀರು ಪೂರೈಕೆ ಬಗ್ಗೆ ಪುರಸಭೆ ಆಡಳಿತ ಇನ್ನಿಲ್ಲದ ನೆಪವೊಡ್ಡಿ ನಿರ್ಲಕ್ಷಿಸಿ, ಸಾರ್ವಜನಿಕರ ತಾಳ್ಮೆ ಶಕ್ತಿ ಪರೀಕ್ಷಿಸದೇ
ತಕ್ಷಣ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಪ್ರತೀ ಬಾರಿ ಒಂದಿಲ್ಲೊಂದು ಸಮಸ್ಯೆ ಹೇಳಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದು ಯಾವ ನ್ಯಾಯ? ಮೊದಲೇ ಬಿಸಿಲಿನ ಬೇಗೆಯಿಂದ ಬೇಸತ್ತ ಜನ ನಾಲ್ಕೈದು ದಿನದಿಂದ ಬಗಲಲ್ಲಿ ಮಕ್ಕಳನ್ನು ಹೊತ್ತು ನೀರು ತರಲು ಹೊರಟದ್ದನ್ನು ನೋಡಿ ಬೇಸರವಾಯಿತು. ಇಂಥ ಪರಿಸ್ಥಿತಿ
ಮರುಕಳಿಸಿದರೆ ಪ್ರತಿಭಟಿಸಲಾಗುವುದು.
. ಎಂ.ಡಿ.ಆಜಮ್‌,
ಪುರಸಭೆ ಪಕ್ಷೇತರ ಸದಸ್ಯ

ಒಡೆದ ಪೈಪ್‌ ಸ್ಥಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ, ವೆಲ್ಡಿಂಗ್‌ ಕಾರ್ಯ ತೀವ್ರಗತಿಯಲ್ಲಿ ಕೈಗೊಳ್ಳಲಾದ ಕಾರಣ 5
ದಿನಗಳಿಂದ ನೀರು ಪೂರೈಸಲಾಗಲಿಲ್ಲ. ಇದೀಗ ದುರುಸ್ತಿಯಾಗಿದೆ. ನಾಳೆ ಸರತಿಯಂತೆ ಓಣಿಗಳಿಗೆ ನೀರು ಪೂರೈಸುತ್ತೇವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.
.ಅಪ್ಸರಮಿಯ್ಯ,
ಪುರಸಭೆ ಆಡಳಿತ ಪಕ್ಷದ ಸದಸ್ಯ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next