Advertisement

ಒತ್ತಡದ ಬದುಕಿಗೆ ಆಧ್ಯಾತ್ಮವೇ ಮದ್ದು

11:32 AM Nov 30, 2019 | Naveen |

ಹುಮನಾಬಾದ: ಒತ್ತಡದ ಬದುಕಿಗೆ ಆಧ್ಯಾತ್ಮವೇ ಮದ್ದು. ಈ ನಿಟ್ಟಿನಲ್ಲಿ ದೈನಂದಿನ ಏನೆಲ್ಲ ಚಟುವಟಿಕೆಗಳ ಮಧ್ಯದಲ್ಲೂ ಆಧ್ಯಾತ್ಮ ಜ್ಞಾನದ ಅರಿವಿಗೆ ನಿತ್ಯ ಒಂದಿಷ್ಟು ಸಮಯ ಮೀಸಲಿಡಬೇಕು ಎಂದು ಮಹರ್ಷಿ ಆನಂದ ಗುರೂಜಿ ಹೇಳಿದರು.

Advertisement

ಪಟ್ಟಣದ ಸಾಯಿ ಕಾಲೋನಿಯನಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಜೀವನದಲ್ಲಿ ವಿವಿಧ ಮದಗಳಿಂದ ಮುಕ್ತವಾದ ಮನುಷ್ಯ ಮಾತ್ರ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಾಳಿ ಬದುಕುತ್ತಾನೆ. ಆದರೇ ತನ್ನ ಐಶ್ವರ್ಯ, ಅಧಿಕಾರ, ರೂಪ, ವಿದ್ಯೆ ಇತ್ಯಾದಿಗಳಿರುವುದು ವ್ಯಕ್ತಿ-ವ್ಯಕ್ತಿತ್ವ ವಿಕಸನಕ್ಕಾಗಿ ಹೊರತು ಅಹಂಕಾರಕ್ಕಾಗಿ ಅಲ್ಲ. ಅಹಂಕಾರವೇ ವ್ಯಕ್ತಿ ವಿನಾಶಕ್ಕೆ ಮೂಲವಾಗುತ್ತದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಯಗೆ ಗುರು- ಹಿರಿಯರನ್ನು ಗೌರವಿಸುವ ಉತ್ತಮ ಸಂಸ್ಕಾರ ಕಲಿಸಿಕೊಡುವ ಅಗತ್ಯವಿದೆ.
ಯಾವ ರಾಷ್ಟ್ರದಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತದೊ ಆ ದೇಶ ಸಕಲ ಸಂಪತ್ತಿನಿಂದ ತುಂಬಿ ತುಳುಕುತ್ತದೆ. ಗೌರವಿಸದ ದೇಶದ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂದರು. ಭವ್ಯ ಸಂಸ್ಕೃತಿ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ಆಕರ್ಷಿಸಿಕೊಂಡ ಈ ದೇಶದಲ್ಲಿ ಹೆಣ್ಣನ್ನು ಅಗೌರವಿದಿಂದ ಕಾಣುವ ನಿದರ್ಶನ ಸಿಗದಂತೆ ಎಚ್ಚರ ವಹಿಸಬೇಕು.

ಪಾಲಕರು ವಿಶೇಷವಾಗಿ ತಮ್ಮ ಹೆಣ್ಣು ಮಕ್ಕಳನ್ನು ಮದುವೆಗೂ ಮುನ್ನ ಅತ್ಯಂತ ಜೋಪಾನದಿಂದ ನೋಡಿಕೊಳ್ಳಬೇಕು ಎಂದರು. ದೇವರ ಮೇಲೆ ನಂಬಿಕೆ ಇಡುವ, ಮನೆ ಮನಸ್ಸು ಯಾವತ್ತೂ ಶುಚಿಯಾಗಿ ಇಟ್ಟುಕೊಳ್ಳುವ ವ್ಯಕ್ತಿಗಳ ಮನೆಯಲ್ಲಿ ಲಕ್ಷ್ಮಿ ಸದಾ ಶಾಶ್ವತವಾಗಿ ನೆಲೆಸುತ್ತಾಳೆ. ಆದರೆ ಮನೆ, ಮನಸ್ಸು ಶುಚಿತ್ವ ಇಲ್ಲದ ಅನ್ಯರ ನೆಮ್ಮದಿ ಕಂಡು ಅಸೂಯೆ ಪಡುವ ಸ್ವಾರ್ಥಿಗಳು ಮತ್ತು ಸೋಮಾರಿಗಳ ಮನೆಯಲ್ಲಿ ಲಕ್ಷ್ಮೀ ಯಾವತ್ತೂ ನಿಲ್ಲುವುದಿಲ್ಲ.

ನಿಂತರೂ ಚಂಚಲೆಯಾಗಿರುತ್ತಾಳೆ. ಈ ನಿಟ್ಟಿನಲ್ಲಿ ತನು-ಮನ ಶುದ್ಧಿಯಾಗಿಟ್ಟು, ನಿರಂತರ ಪರಿಶ್ರಮ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು. ಬಸವಾದಿ ಶರಣರು, ಮಹಾನ್‌ ಸಂತರು, ಪವಾಡ ಪುರುಷರು ನಡೆದಾಡಿದ ಈ ಪುಣ್ಯ ಭೂಮಿಯ ಜನ ಅದೃಷ್ಟಶಾಲಿಗಳು ಎಂದು ಹೇಳಿದರು.

Advertisement

ಶಾಸಕ ರಾಜಶೇಖರ ಬಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ|ಚಂದ್ರಶೇಖರ ಬಿ.ಪಾಟೀಲ, ಬಿಜೆಪಿ ರಾಜ್ಯ ಮುಖಂಡ ಸುಭಾಷ ಕಲ್ಲೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್‌, ಸೋನಮ್ಮ ಪಾಟೀಲ, ವಿಜಯಲಕ್ಷ್ಮಿ ಎ.ಪಾಟೀಲ, ಭೀಮಣ್ಣ ಪಾಟೀಲ ಪ್ರಮುಖರಾದ ರಾಘವೇಂದ್ರ ಪಾಟೀಲ, ರಾಹುಲ್‌ ಪಾಟೀಲ ಇನ್ನಿತರ ಗಣ್ಯರು ವೇದಿಕೆಯಲ್ಲಿದ್ದರು. ನಗರೇಶ್ವರ ಶಾಲೆಯ ಸ್ವಾತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗೇಮು ಚವ್ಹಾಣ ಸ್ವಾಗತಿಸಿದರು. ಜ್ಞಾನೇಶ್ವರ ನಿರೂಪಿಸಿದರು.

ರಮೇಶ ಭಾಸ್ಕರ ವಂದಿಸಿದರು. ರವೀಂದ್ರನಾಥ ಟ್ಯಾಗೋರ ಶಾಲೆಯ ವಿದ್ಯಾರ್ಥಿಗಳು ಹಾಗೂ ನಗರೇಶ್ವರ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಭರಟನಾಟ್ಯ ಗಮನ ಸೆಳೆಯಿತು.

ಭವ್ಯ ಮೆರವಣಿಗೆ: ಪ್ರವಚನ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನಗರೇಶ್ವರ ಮಂದಿರ ಹತ್ತಿರದಿಂದ ಬಸವೇಶ್ವರ ವೃತ್ತ, ಬಾಲಾಜಿ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ, ಡಾ|ಅಂಬೇಡ್ಕರ್‌ ವೃತ್ತ, ಕೇಂದ್ರ ಬಸ್‌ ನಿಲ್ದಾಣದ ಮೂಲಕ ದಿ.ರಾಮಚಂದ್ರ ಆರ್ಯ ವೃತ್ತದ ಮಾರ್ಗವಾಗಿ ಪ್ರವಚನದ ವೇದಿಕೆ ಇರುವ ಸಾಯಿನಗರ ಬಡಾವಣೆಗೆ ಆನಂದ ಗುರೂಜಿ ಅವರನ್ನು ಅಲಂಕೃತ ಸಾರೋಟದಲ್ಲಿ ಮೆರವಣಿಗೆ ಮೂಲಕ ಕರೆದು ತರಲಾಯಿತು.

ಆಕರ್ಷಕ ವಾದ್ಯವೃಂದ, ನಗರೇಶ್ವರ ಶಾಲಾ ಮಕ್ಕಳು ಪ್ರದರ್ಶಿಸಿದ ಕೋಲಾಟ, ಭಕ್ತಿಗೀತೆಗೆ ನೃತ್ಯ ಮೆರವಣಿಗೆಯ ಮೆರಗು ಹೆಚ್ಚಿಸಿದವು. ಮೆರವಣಿಗೆಯಲ್ಲಿ ಆರ್ಯವೈಶ್ಯ ಸಮಾಜ ಮಹಿಳಾ ಘಟಕ ಮುಖ್ಯಸ್ಥೆ ಸಂಧ್ಯಾರಾಣಿ ರಘೋಜಿ, ಡಾ|ನಿರ್ಮಲಾ ರಾಯಚೂರಕರ್‌, ಸೋನಾಲಿ ಜಾಜಿ, ಬಿ.ಜ್ಯೋತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next