ಹುಮನಾಬಾದ: ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಿ, ತಾಳ್ಮೆಯಿಂದ ವಾಹನ ಚಾಲನೆ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂದು ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ ಹೇಳಿದರು.
ಪಟ್ಟಣದ ಯಲಾಲ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಪೊಲೀಸ್ ಮತ್ತು ಸಂಚಾರಿ ಪೊಲೀಸ್ ಠಾಣೆ ಹುಮನಾಬಾದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಹನಗಳ ವೇಗದ ಮಿತಿ ಕಡಿಮೆಗೊಳಿಸಿ ಪ್ರತಿಯೊಬ್ಬರೂ ತಾಳ್ಮೆಯಿಂದ ವಾಹನ ಚಾಲನೆ ಮಾಡಿದಾಗ ಎಷ್ಟೋ ಅಪಘಾತಗಳನ್ನು ತಡೆಯಲು ಸಾಧ್ಯವಿದೆ. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ ಅವರು, ಕಾನೂನು ಉಲ್ಲಂಘನೆ ಆಗದಂತೆ ಪ್ರತಿಯೊಬ್ಬ ವಾಹನ ಚಾಲಕರೂ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸುಜಾತಾ ಮಾತನಾಡಿ, ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸದೇ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಲಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಕೂಡ ಅಪಘಾತ ಸಂಭವಿಸಬಹುದು. ಹೊಸ ಮೋಟಾರು ವಾಹನ ಕಾಯ್ದೆಯಡಿ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಭಾರಿ ದಂಡ ವಿಧಿಸಲಾಗುತ್ತಿದೆ. ವಾಹನ ಚಲಾಯಿಸುವ ಮುನ್ನ ಕಾನೂನು ಪಾಲನೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಶಾಂತವೀರ ಯಲಾಲ ಮಾತನಾಡಿ, ಅಸಹಾಯಕರು, ಅಂಗವಿಕಲರಿಗೆ ಹಾಗೂ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಜೀವ ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ನಂತರ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಜಾಥಾ ನಡೆಸಿದರು. ಶಿಕ್ಷಣ ದತ್ತಿಯ ನಿರ್ದೇಶಕ ಪ್ರಜ್ವಲ್ ಯಲಾಲ, ಪೇದೆಗಳಾದ ರಾಜೇಂದ್ರ ರಂಜೇರಿ, ಗೌತಮ ಉದಗಿರೆ, ವಸಂತ ಕುಂಬಾರ, ತಾಜೋದ್ದೀನ್, ಬಾಬು, ಆಕಾಶ, ಮುಖ್ಯ ಶಿಕ್ಷಕ ತುಕರಾಮ ಬೈನೋರ್, ಶಶಿಕಾಂತ ಕೆ.ಭಗೋಜಿ, ರೇಣುಕಾ ಸೇರಿದಂತೆ ಅನೇಕರು ಇದ್ದರು.