Advertisement

ನೇತ್ರದಾನದಿಂದ ದೃಷ್ಟಿಹೀನರಿಗೆ ಬೆಳಕು

12:20 PM Oct 11, 2019 | Team Udayavani |

ಹುಮನಾಬಾದ: ಮೃತಪಟ್ಟ ನಂತರ ಕಣ್ಣುಗಳು ಮಣ್ಣಲ್ಲಿ ಕೊಳೆತು ವ್ಯರ್ಥವಾಗುವ ಬದಲಿಗೆ ದಾನ ಮಾಡಿ ಮಾನವೀಯತೆ ಮೆರೆದರೆ ದೃಷ್ಟಿಹೀನರು ಸೃಷ್ಟಿಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.

Advertisement

ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು ಎಂದು ಸಿಪಿಐ ಜೆ.ಎಸ್‌. ನ್ಯಾಮಗೌಡರ್‌ ಹೇಳಿದರು.

ಪಟ್ಟಣದಲ್ಲಿ ವಿಶ್ವ ದೃಷ್ಟಿ ಹೀನರ ದಿನಾಚರಣೆ ಹಾಗೂ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಆರ್ಬಿಟ್‌ ಸಂಸ್ಥೆ ಏರ್ಪಡಿಸಿದ್ದ “ದೃಷ್ಟಿಹೀನರ ನಡಿಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿದ ಮೇಲೆ ಎಂದಾದರೊಂದು ದಿನ ಸಾಯುವುದು ಖಚಿತ. ಈ ನಿಟ್ಟಿನಲ್ಲಿ ಜೀವಿತಾವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡಬೇಕು. ಅಲ್ಲದೇ ಇಡೀ ದೇಹದಾನ ಮಾಡುವ ಮೂಲಕ ಪರೋಪಕಾರಿಯಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಶೋಭಾ ಕಟ್ಟಿ ಮಾತನಾಡಿ, ದೃಷ್ಟಿ ಹೀನತೆ ಶಾಪವಲ್ಲ. ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸದಿರುವ ಹಿನ್ನೆಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ದೃಷ್ಟಿ ಮೊದಲಾದ ಅಂಗ ವೈಕಲ್ಯಕ್ಕೆ ಒಳಗಾಗುತ್ತಾರೆ ಎಂದರು.

Advertisement

ಇಂದು ದೃಷ್ಟಿಹೀನರ ದಿನಾಚರಣೆ ನಿಮಿತ್ತ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಒಂದು ಗಂಟೆಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ತೆರಳಲು ಇನ್ನಿಲ್ಲದ ಹರಸಾಹಸ ಪಟ್ಟೆವು. ಆದರೆ ದೃಷ್ಟಿ ಹೀನರು ಜೀವನ ಪರ್ಯಂತ ಅದು ಹೇಗೆ ಬದುಕುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಯಿತು ಎಂದರು.

ಮುಖ್ಯ ಅತಿಥಿಯಾಗಿದ್ದ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ಆರ್ಬಿಟ್‌ ಸಂಸ್ಥೆ ಕಾರ್ಯ ಪ್ರಶಂಸನೀಯ. ಸರ್ಕಾರ ಮಾಡುವ ಬಹುತೇಕ ಯೋಜನೆಗಳಲ್ಲಿ ಒಂದೂವರೆ ದಶಕದಿಂದ ತೊಡಗಿಸಿಕೊಂಡು ಕೈ ಜೋಡಿಸುತ್ತಿರುವುದು ಆರೋಗ್ಯಪೂರ್ಣ ಬೆಳವಣಿಗೆ. ಆರ್ಬಿಟ್‌ ಸಂಸ್ಥೆಯವರು ಕೈಗೊಳ್ಳುವ ಪ್ರತಿಯೊಂದು ಜನಪರ ಕಾರ್ಯಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ನೆರವು ನೀಡಲು ಪುರಸಭೆ ಸದಾ ಸಿದ್ಧವಿದೆ ಎಂದರು.

ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶೆಟ್ಟಿ ಮಾತನಾಡಿ, ಸರ್ಕಾರ ಈ ನಿಟ್ಟಿನಲ್ಲಿ ತನ್ನ ಏನೆಲ್ಲ ಪ್ರಯತ್ನ ಮಾಡುತ್ತಿದೆಯಾದರೂ ಆರ್ಬಿಟ್‌ ಸಂಸ್ಥೆಯ ತಂಡ ಈ ಸೇವೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಕೆಲಸಗಳಲ್ಲಿ ನೆರವಾಗುತ್ತಿರುವುದು ಪ್ರಶಂಸನೀಯ ಎಂದರು.

ಆರ್ಬಿಟ್‌ ಸಂಸ್ಥೆಯ ನಿರ್ದೇಶಕ ಫಾದರ್‌ ಅನೀಲ ಕ್ರಾಸ್ತಾ ಪ್ರಾಸ್ತಾವಿಕ ಮಾತನಾಡಿ, ಆರ್ಬಿಟ್‌ ಸಂಸ್ಥೆ ವಿಶ್ವದೃಷ್ಟಿ ಹೀನರ ದಿನಾಚರಣೆ ಅಂಗವಾಗಿ ಒಂದಿಲ್ಲೊಂದು ಕಡೆ ಈ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. 2016ನೇ ಸಾಲಿನಲ್ಲಿ ಬೀದರನಲ್ಲಿ, 2017ನೇ ಸಾಲಿನಲ್ಲಿ ಸೇಡಂ, 2018ನೇ ಸಾಲಿನಲ್ಲಿ ಕಲಬುರಗಿ ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೂರು ವರ್ಷಗಳಲ್ಲಿ 70ಜನ ದೃಷ್ಟಿ ದಾನಕ್ಕೆ ಒಪ್ಪಿಗೆ ಸೂಚಿಸಿದರೆ ಈ ವರ್ಷ 10 ಜನ ಒಪ್ಪಿಗೆ ಪತ್ರಕ್ಕೆ ಸ್ವ ಇಚ್ಛೆಯಿಂದ ಸಹಿ ಹಾಕಿದ್ದಾರೆ ಎಂದರು.

ಈ ಜಾಗೃತಿ ಮೂಲಕ ವಿಶೇಷ ಸೌಲಭ್ಯ ವಂಚಿತರಲ್ಲಿ ಆತ್ಮಸ್ಥೈರ್ಯ ತುಂಬಿ ಸಾಧನೆಗೆ ಪ್ರೋತ್ಸಾಹಿಸುವುದೇ ಆಗಿದೆ ಎಂದರು.

ರ್ಯಾಲಿಯಲ್ಲಿ ಭಾಗವಹಿಸಿದ್ದ ಶಾಂತಿಕಿರಣ ಶಾಲೆ ಮಕ್ಕಳು ಮತ್ತು ಜಿ.ಎಂ. ಖೇಣಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಮಾಣಪತ್ರ ವಿತರಿಸಲಾಯಿತು. ಫಾದರ್‌ ಬಾಪು, ಫಾದರ್‌ ಜೆರಾಲ್ಡ್‌, ಮೋನಿಸಾ ಇದ್ದರು. ಪ್ರವಾಸಿ ಮಂದಿರ, ಡಾ|ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಪುರಸಭೆ ಕಚೇರಿ ವರೆಗೆ ನಡೆದ ರ್ಯಾಲಿಯಲ್ಲಿ ಅಧಿಕಾರಿಗಳು, ಆರ್ಬಿಟ್‌ ಸಂಸ್ಥೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಣ್ಣಿಗೆ ಪಟ್ಟಿಕಟ್ಟಿಕೊಂಡು ಸಾರ್ವಜನಿಕರ ಗಮನ
ಸೆಳೆದರು. ತುಕ್ಕಾರೆಡ್ಡಿ ಸ್ವಾಗತಿಸಿದರು. ರವಿ ಕೊಡ್ಡಿಕರ್‌ ನಿರೂಪಿಸಿದರು. ಅರುಣಕುಮಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next