ಹುಮನಾಬಾದ: ಏ.14ರ ನಂತರ ಒಂದೇ ಬಾರಿಗೆ ಲಾಕ್‌ಡೌನ್ ತೆರವುಗೊಂಡರೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಅಧಿ ಕಾರಿಗಳು ಈ ಬಗ್ಗೆ ಚಿಂತಿಸಬೇಕಿದೆ. ಸರ್ಕಾರದಿಂದ ಸೂಕ್ತ ನಿರ್ದೇಶನ ಬರುವ ಸಾಧ್ಯತೆ ಇದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಕೊರೊನಾ ವೈರಸ್ ಹಾಗೂ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಒಂದೇ ಬಾರಿಗೆ ಲಾಕ್‌ಡೌನ್ ತೆರವು ಮಾಡಿದರೆ ಮನೆಯಲ್ಲಿದ್ದ ಜನ ಒಂದೇ ಬಾರಿಗೆ ರಸ್ತೆಗೆ ಬರುತ್ತಾರೆ. ಹೀಗಾಗಿ ಹೆಚ್ಚಿನ ಜನದಟ್ಟಣೆ ಉಂಟಾಗಬಹುದು. ಈ ಬಗ್ಗೆ ಅಧಿಕಾರಿಗಳು ಕೂಡ ಚಿಂತನೆ ನಡೆಸಬೇಕಿದೆ. ಲಾಕ್‌ಡೌನ್ ತೆರವುಗೊಂಡರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದು, ಈಗಿನ ನಿಯಮಗಳು ಮುಂದೆಯೂ ಜಾರಿಯಲ್ಲಿರುತ್ತವೆ ಎಂದರು.
ಸಾರ್ವಜನಿಕರ ಆರೋಗ್ಯ ತಪಾಸಣೆಗೆ ಜನರ ಮನೆಗಳಿಗೆ ತೆರಳುವ ಆರೋಗ್ಯ ಸಿಬ್ಬಂದಿಗೆ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ತೊಂದರೆಯಾದರೆ ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗ ಬೇಕೆಂದು ಸೂಚಿಸಿದರು. ಡಿವೈಎಸ್‌ಪಿ ಮಹೇಶ್ವರಪ್ಪ ಮಾತನಾಡಿ, ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸಿಬ್ಬಂದಿ ಬಳಸಿಕೊಂಡು ಬಂದೋಬಸ್ತ್ ಮಾಡಲಾಗುತ್ತಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಾಚಪ್ಪ ಪಾಟೀಲ ಮಾತನಾಡಿ, ಸದ್ಯ ಹುಮನಾಬಾದ-ಚಿಟಗುಪ್ಪ ತಾಲುಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಕಂಡು ಬರುವ ಕಡೆಗೆ ವ್ಯವಸ್ಥೆ ಮಾಡಲು ಇಲಾಖೆ ಸಜ್ಜಾಗಿದೆ ಎಂದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಕ್ಷೇತ್ರದ ಮೂರು ಪುರಸಭೆಗಳು ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಪಟ್ಟಣಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಬಡವರಿಗೆ ಹಾಲು ಹಂಚು ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್ ನಾಗಯ್ನಾ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.