Advertisement

ಸೂರಿಲ್ಲ .ಇವರಿಗೆ ಗುಡಿಸಲೇ ಎಲ್ಲ..!

07:58 PM Oct 30, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ
: ಸದಾ ಜನರಿಂದ ತುಂಬಿದ ಪಟ್ಟಣದ ಹೃದಯಭಾಗ ಎಂದೇ ಹೇಳಲಾಗುವ ಮಾಣಿಕನಗರದ ಪ್ರವೇಶ ದ್ವಾರ ಹಾಗೂ ಬೀದರ್‌ ರಸ್ತೆ ತಿರುವಿಗೆ ಹೊಂದಿಕೊಂಡಿರುವ ಗುಡಿಸಲು ವಾಸಿಗಳಿಗೆ ಇನ್ನೂ ಸೂರು ದೊರೆಯದಿರುವುದು ವಿಪರ್ಯಾಸ.

Advertisement

ಕಳೆದ ಎರಡೂವರೆ ದಶಕದಿಂದ ಬೀಸುವ ಕಲ್ಲು, ಒರಳುಗಳನ್ನು ನಿರ್ಮಿಸಿಕೊಂಡು ತಲೆ ಮೇಲೆ ಹೊತ್ತುಕೊಂಡು ಪಟ್ಟಣದ ವಿವಿಧ ವಾರ್ಡ್‌ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಗೆ ಅಲೆದಾಡಿ ಬದುಕು ನಡೆಸುತ್ತಿರುವ ಬೋವಿ ಸಮಾಜಕ್ಕೆ ಸೇರಿದ ಕೆಲ ಕುಟುಂಬಗಳು ನೆಲೆಯಿಲ್ಲದೇ ಗುಡಿಸಲಿನಲ್ಲಿಯೇ ವಾಸವಾಗಿದ್ದಾರೆ.

ಈ ಗುಡಿಸಲುಗಳಲ್ಲಿ 50ಕ್ಕೂ ಅಧಿಕ ಜನರು ಮಳೆ, ಚಳಿ, ಗಾಳಿ, ಬಿಸಿಲು, ವಿಷಜಂತು, ನಾಯಿ, ಹಂದಿ ಕಾಟ ಜತೆಗೆ ವಾಹನಗಳು ಉಗುಳುವ ವಿಷಯುಕ್ತ ಹೊಗೆ, ಸದ್ದು ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆ ಬಂದಾಗ ಗುಡಿಸಲುಗಳು ಅದೆಷ್ಟೋ ಸಲ ಜಲವೃತಗೊಂಡಿದ್ದಾಗಿದೆ. ನಿತ್ಯವೂ ಸೊಳ್ಳೆಕಾಟ ತಪ್ಪಿದ್ದಲ್ಲ. ಮಕ್ಕಳು ಮಲೇರಿಯಾ, ಟೈಫಾಯ್ಡ ಮತ್ತಿತರ ಕಾಯಿಲೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ನೋವಿನಿಂದ  ನುಡಿಯುತ್ತಾರೆ ನಾಗಪ್ಪ ಬೋವಿ.

ಈ ಕುಟುಂಬಗಳು ಕಳೆದ ಒಂದೂವರೆ ದಶಕ ಹಿಂದೆಯೇ ಸ್ಥಳೀಯ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿದರೂ ಯಾರೊಬ್ಬರೂ ಗಮನ ಹರಿಸಿದ್ದಿಲ್ಲ. ಆರಂಭದಲ್ಲಿ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ  ನೀಡಿದಾಗ ನೀವು ಸ್ಥಳೀಯ ನಿವಾಸಿಗಳು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ನಿಯಮಾನುಸಾರ ನಿಮಗೆ ಮನೆ ಮಂಜೂರು ಆಗಲ್ಲ ಎಂದು ಹೇಳಿ ತಿರಸ್ಕರಿಸಿದ್ದರು.

ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ಕುಟುಂಬಗಳು ಮತದಾರರ ಗುರುತಿನ ಚೀಟಿ, ಆಧಾರ್‌, ಪಡಿತರ ಚೀಟಿ ಸೇರಿದಂತೆ ಎಲ್ಲ ಪ್ರಮಾಣಪತ್ರಗಳನ್ನು ಪಡೆದಿದ್ದಾಗಿದೆ ಆದರೂ ಸೂರು ಮಾತ್ರ ಸಿಕ್ಕಿಲ್ಲ.

Advertisement

ಮತಕ್ಕೆ ಬೇಕು ಮನೆ ಬೇಡ: ನಾವು ಸರ್ಕಾರದ ನಿಯಮ ಪ್ರಕಾರ ಎಲ್ಲ ಪ್ರಮಾಣಪತ್ರ ಹೊಂದಿದ್ದೇವೆ. ಪ್ರತಿ ಚುನಾವಣೆ ವೇಳೆ ತಪ್ಪದೇ ನಮ್ಮನ್ನು ಆಟೋದಲ್ಲಿ ಮತದಾನಕ್ಕಾಗಿ ಕರೆದೊಯುತ್ತಾರೆ. ನಮ್ಮ ಹಕ್ಕನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸುತ್ತೇವೆ. ಆದರೆ ಮನೆ ಭಾಗ್ಯ ಕಲ್ಪಿಸುವಂತೆ ಮಾಡಿದ ಮನವಿಗೆ ಪುರಸಭೆ ಆಡಳಿತ ತಿರಸ್ಕರಿಸುವುದು ಯಾವ ನ್ಯಾಯ ಎನ್ನುತ್ತಾರೆ ಅಶೋಕ ಬೋವಿ.

Advertisement

Udayavani is now on Telegram. Click here to join our channel and stay updated with the latest news.

Next