Advertisement

ಹಳ್ಳಿಖೇಡದ ವಿಶಿಷ್ಟ ನಾಗೇಶ್ವರನಿಗೆ ವಿಶೇಷ ಪೂಜೆ

10:05 AM Aug 05, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ನಾಗರ ಪಂಚಮಿ ಹಬ್ಬವನ್ನು ದೇಶದೆಲ್ಲಡೆ ವೈಶಿಷ್ಟ ್ಯಪೂರ್ಣ ಆಚರಿಸಲಾಗುತ್ತದೆ. ಆದರೆ ಹಳ್ಳಿಖೇಡ(ಬಿ) ಪಟ್ಟಣದಲ್ಲಿರುವ ನಾಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುವ ನಾಗರಪಂಚಮಿಗೆ ಕೇವಲ ಪಟ್ಟಣ, ತಾಲೂಕು, ಜಿಲ್ಲೆ ಮಾತ್ರವಲ್ಲದೇ ಇಡೀ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲೇ ವಿಶೇಷ ಮಹತ್ವವಿದೆ.

Advertisement

ವಿಶೇಷ ಪೂಜೆಗಳ ಮೂಲಕ ವಿವಿಧ ನಾಗದೋಷಗಳಿಗೆ ಪರಿಹಾರ ಕಂಡುಕೊಳ್ಳಲು ಇಲ್ಲಿ ಅವಕಾಶವಿದೆ. ಇಲ್ಲಿ ಇತರೆಡೆಯಂತೆ ಕೇವಲ ಒಂದು ದಿನದ ಉತ್ಸವವಾಗಿ ಆಚರಿಸದೇ, ತವರು ಮರೆಮಾಚಿದ ಮಹಿಳೆಯರಿಗೆ ನಾಗೇಶ್ವರ ದೇವಸ್ಥಾನ ಒಂದು ರೀತಿಯಲ್ಲಿ ತವರಿಗೂ ಮೀರಿದಂತೆ ಮಹಿಳೆಯರು ಇಲ್ಲಿ ಪೂಜಿಸುತ್ತಾರೆ. ಆ ಕಾರಣಕ್ಕಾಗಿಯೇ ಈ ದೇವಸ್ಥಾನ ಮಹಿಳೆಯರ ಪಾಲಿನ ಎರಡನೇ ತವರೆಂದು ಕರೆಯಲಾಗುತ್ತದೆ. ಈ ಊರಿಗೆ ಬಂದ ಬಹುತೇಕ ಸೊಸೆಯಂದಿರು ಈ ಹಬ್ಬಕ್ಕೆ ತವರಿಗೆ ಹೋಗದೇ ಈ ಊರನ್ನೇ ತವರೆಂದು ಭಾವಿಸಿ, ನಾಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಕೃತಾರ್ಥರಾಗುತ್ತಾರೆ.

ಹೊಸ ಬಟ್ಟೆ ಧರಿಸಿ, ಅಲಂಕಾರಗಳೊಂದಿಗೆ ಕೈಯಲ್ಲೊಂದು ಹಾಲು ತುಂಬಿದ ತಂಬಿಗೆ, ಜೋಳದ ಅಳ್ಳು, ಅಳ್ಳಿಟ್ಟು, ಕಡಲೆ ಇತ್ಯಾದಿಗಳನ್ನು ನಾಗನಾಥ ದೇವರಿಗೆ ನೈವೇದ್ಯ ಸ್ವರೂಪದಲ್ಲಿ ಸಮರ್ಪಿಸುತ್ತಾರೆ. ಇಲ್ಲಿ ವರ್ಷವಿಡೀ ಕ್ಷೀರಾಭಿಷೇಕ ಇತ್ಯಾದಿ ನಡೆಯುತ್ತಿರುತ್ತವೆ. ನಾಗೇಶ್ವರ ಮೂರ್ತಿ ಮೆರವಣಿಗೆ ನಡೆಯುವುದರಿಂದ ಪ್ರತೀ ವರ್ಷಷ ಡಿಸೆಂಬರ್‌ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆದರೂ ಕೂಡ, ಉತ್ಸವಗಳ ದೃಷ್ಟಿಯಿಂದ ನೋಡಿದಾಗ ಈಗ ನಡೆಯುವ ನಾಗಪಂಚಮಿ ಸೇರಿ ಒಟ್ಟು ಎರಡು ದೊಡ್ಡ ಜಾತ್ರೆ ನಡೆಯುವುದು ಹಳ್ಳಿಖೇಡ(ಬಿ) ಪಟ್ಟಣದ ನಾಗಪಂಚಮಿ ವಿಶೇಷ.

ಮಾಲಾಧಾರಿಗಳ ವ್ರತ: ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ 41 ದಿನಗಳ ಕಾಲ ಚಾಕಲೇಟ್ ವರ್ಣದ ಉಡುಪನ್ನು ಧರಿಸುತ್ತಾರೆ. ಅಯ್ಯಪ್ಪಸ್ವಾಮಿ ಭಕ್ತರು ಧರಿಸುವ ಮಾಲಾಧಾರಿಗಳ ಮಾದರಿಯಲ್ಲೇ ಇವರೂ ಮಾಲಾಧಾರಿಗಳಾಗಿ ವ್ರತ ನಡೆಸುತ್ತಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಳ್ಳಿಖೇಡ (ಬಿ) ನಾಗೇಶ್ವರ ದೇವಸ್ಥಾನ ಹೈದ್ರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಏಕೈಕ ನಾಗೇಶ್ವರ ದೇವಾಲಯ. ಒಂದು ನಾಗಪಂಚಮಿ ಸಂಭ್ರಮ, ಎರಡನೇಯದು ದೀಪಾವಳಿಯಲ್ಲಿ ನಡೆಯುವ ನಾಗೇಶ್ವರ ಜಾತ್ರೆಯ ಸಂಭ್ರಮ. ಉತ್ಸವ ಸಂದರ್ಭದಲ್ಲಿ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್‌ ನಿಯೋಜನೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ನಾಗಯ್ಯಸ್ವಾಮಿ,
ತಹಶೀಲ್ದಾರ್‌ ಹುಮನಾಬಾದ

Advertisement

ಸಂತಾನ ಫಲ ಪ್ರಾಪ್ತಿ, ನಾಗದೋಷ, ಕಾಳಸರ್ಪದೋಷ ನಿವಾರಣೆ, ಮಂಗಳ ದೋಷ ನಿವಾರಣೆ, ದೃಷ್ಟಿದೋಷ, ಚರ್ಮರೋಗ ಶಾಶ್ವತ ನಿರ್ಮೂಲನೆ ಕಟ್ಟಿಟ್ಟ ಬುತ್ತಿ. ಭಕ್ತಿ, ಶ್ರದ್ಧೆಯಿಂದ ಪೂಜಿಸುವ ಭಕ್ತರಿಗೆ ನವಫಲಗಳು ಪ್ರಾಪ್ತಿಯಾಗುತ್ತವೆ. ಇದೇ ಕಾರಣಕ್ಕಾಗಿ ಇಲ್ಲಿಗೆ ಕೇವಲ ಹಳ್ಳಿಖೇಡ (ಬಿ) ಪಟ್ಟಣ, ಜಿಲ್ಲೆ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
ಡಾ| ಅಶೋಕಸ್ವಾಮಿ ಹಾಲಾ,
ಪ್ರಧಾನ ಅರ್ಚಕರು

Advertisement

Udayavani is now on Telegram. Click here to join our channel and stay updated with the latest news.

Next