Advertisement

ಕಾಂಗ್ರೆಸ್‌ ಅತೃಪ್ತರ ಸೆಳೆಯಲು ತಂತ್ರ

10:22 AM May 10, 2019 | Team Udayavani |

ಹುಮನಾಬಾದ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್‌ಗಿಂತ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ್ದು, ಆ ಪಕ್ಷದಲ್ಲಿನ ಅತೃಪ್ತರನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ತಂತ್ರ ನಡೆಸುತ್ತಿವೆ.

Advertisement

ಹುಮನಾಬಾದ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷಗಳ ಪೈಕಿ ಕಾಂಗ್ರೆಸ್‌ನದು ಮೊದಲ ಸ್ಥಾನ. ಜೆಡಿಎಸ್‌ ಎರಡನೇ ಸ್ಥಾನದಲ್ಲಿದೆ. ಆದರೆ ಬಿಜೆಪಿ ಈವರೆಗೆ ಒಮ್ಮೆಯೂ ಅಧಿಕಾರ ಚುಕ್ಕಾಣಿ ಹಿಡಿದ ನಿದರ್ಶನವಿಲ್ಲ. ಇನ್ನೂ ಬಿಎಸ್‌ಪಿ ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧೆಗೆ ಮುಂದಾಗಿದೆ.

ಹುಮನಾಬಾದ ಪುರಸಭೆ 43,000 ಜನಸಂಖ್ಯೆ ಹೊಂದಿದ್ದರಿಂದ ಈ ಹಿಂದೆ ಕೇವಲ 23 ವಾರ್ಡ್‌ ಗಳಿದ್ದವು. ಈಗ ಜನಸಂಖ್ಯೆ 55,000 ತಲುಪಿದ ಹಿನ್ನೆಲೆಯಲ್ಲಿ ವಾರ್ಡ್‌ ಮರುವಿಂಗಡಣೆಯಾದ ನಂತರ ವಾರ್ಡ್‌ಗಳ ಸಂಖ್ಯೆ 27ಕ್ಕೆ ಏರಿದೆ. ಪ್ರತೀ ವಾರ್ಡ್‌ನಲ್ಲಿ ಕನಿಷ್ಠ 800, ಗರಿಷ್ಠ 1,200 ಮತದಾರರಿದ್ದಾರೆ.

ಆಕಾಂಕ್ಷಿಗಳ ಸಂಖ್ಯೆ ತ್ರಿಗುಣ: ಹುಮನಾಬಾದ್‌ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಕೈಯಲ್ಲಿರುವುದು ಮತ್ತು ಈ ಕ್ಷೇತ್ರ ಪ್ರತಿನಿಧಿಸುವ ಶಾಸಕರೆ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದರಿಂದ ಸಹಜವಾಗಿಯೇ ಕಾಂಗ್ರೆಸ್‌ ಪ್ರಬಲವಾಗಿದೆ. ಕಾರಣ ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಬೇರೆ ಪಕ್ಷಗಳಿಗಿಂತ ಕಾಂಗ್ರೆಸ್‌ನಲ್ಲಿ ಹೆಚ್ಚು ಇದೆ.

ಅತೃಪ್ತರನ್ನು ಸೆಳೆಯಲು ತಂತ್ರ: ವಿಶೇಷವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಆ ಪಕ್ಷದಲ್ಲೇ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಅತೃಪ್ತರಾಗುವ ಸಾಧ್ಯತೆ ಇದೆ. ಕಾರಣ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್‌ನ ಅತೃಪ್ತ ಹಾಗೂ ಪ್ರಬಲರಿಗೆ ತಮ್ಮ ಪಕ್ಷದಿಂದ ಟಿಕೆಟ್ ನೀಡಿ, ಗೆಲ್ಲಿಸಲು ತೆರೆಮರೆಯಲ್ಲೆ ಇನ್ನಿಲ್ಲದ ತಂತ್ರ ರಚಿಸುತ್ತಿರುವ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿವೆ.

Advertisement

ವಾರ್ಡ್‌ ಮರುವಿಂಗಡಣೆ: ಈ ಮಧ್ಯ ಈ ಹಿಂದೆ 23 ವಾರ್ಡ್‌ಗಳಿದ್ದಾಗ ಮೀಸಲಾದ ವಾರ್ಡ್‌ಗಳಲ್ಲಿ ಮತದಾರ ಸಂಖ್ಯೆ ಸಾಕಷ್ಟಿದ್ದರಿಂದ ಅಭ್ಯರ್ಥಿಗಳಿಗೆ ಯಾವುದೇ ಭಯ ಇರಲಿಲ್ಲ. ಆದರೇ ಈ ಬಾರಿ ವಾರ್ಡ್‌ಗಳ ಮರುವಿಂಗಡಣೆ ಆದ ನಂತರ ಮೀಸಲಾದ ವಾರ್ಡ್‌ನಲ್ಲಿ ಆ ಜಾತಿಯ ಶೇ.15ಮಾತ್ರ ಆಗಿರುವುದು ಸಹಜವಾಗಿಯೇ ಎಲ್ಲ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ತಲೆಬಿಸಿಗೆ ಕಾರಣವಾಗಿದೆ.

ಈವರೆಗೆ ಬಂದ ಅರ್ಜಿಗಳು: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಕಾಂಗ್ರೆಸ್‌ ಪಕ್ಷಕ್ಕೆ 100ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಬಿಜೆಪಿಗೆ 75ಕ್ಕೂ ಅಧಿಕ ಅರ್ಜಿಗಳು ಬಂದರೆ ಜೆಡಿಎಸ್‌ ಪಕ್ಷಕ್ಕೆ ಪ್ರತಿ ವಾರ್ಡ್‌ನಿಂದ ತಲಾ ಒಂದು ಅರ್ಜಿ ಅಂದರೇ 27 ಜನ ಅರ್ಜಿ ಸಲ್ಲಿಸಿದ್ದಾರೆ. ಬಿಎಸ್‌ಪಿ ಸಹ ಈ ಬಾರಿ ಸ್ಪರ್ಧೆಗಿಳಿಯುವ ಕಾರಣ ಈವರೆಗೆ ವಿವಿಧ ವಾರ್ಡ್‌ ಗಳಿಂದ 20ಕ್ಕೂ ಅಧಿಕ ಅರ್ಜಿಗಳು ಬಂದಿವೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕಡೆಯ ದಿನಾಂಕ. 17ಕ್ಕೆ ನಾಮಪತ್ರ ಪರಿಶೀಲನೆ, 20 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾದ ಹಿನ್ನೆಲೆಯಲ್ಲಿ ಆ ವರೆಗೆ ಏನೆಲ್ಲ ಬೆಳವಣಿಗೆ ಆಗುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

ನಮ್ಮದು ದೊಡ್ಡ ಪಕ್ಷ. ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸಹಜ. ಈವರೆಗೆ ಟಿಕೆಟ್ಗಾಗಿ ನಮ್ಮಲ್ಲಿ 100ಕ್ಕೂ ಅಧಿಕ ಅರ್ಜಿ ಬಂದಿವೆ. ಬೇರೆ ಪಕ್ಷಗಳಿಗೆ ನಗರದ ಅದೆಷ್ಟೋ ವಾರ್ಡ್‌ಗಳಲ್ಲಿ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ. ನಮ್ಮ ಕಾರ್ಯಕರ್ತರು ಸದಾ ಜನಸಂಪರ್ಕದಲ್ಲಿರುತ್ತಾರೆ. ಹೀಗಾಗಿ ಅನ್ಯ ಪಕ್ಷದವರು ಆ ನಿರೀಕ್ಷೆಯನ್ನಿಟ್ಟುಕೊಳ್ಳುವುದು ಸಹಜ. ಆದರೆ ಅಸಮಧಾನ ಶನಮಗೊಳಿಸಿ, ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿ ನಮ್ಮಲ್ಲಿಯೇ ಉಳಿಸಿಕೊಳ್ಳುತ್ತೇವೆ.
ಅಪ್ಸರಮಿಯ್ಯ,
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಹುಮನಾಬಾದ

ಹುಮನಾಬಾದ ಪುರಸಭೆಯಲ್ಲಿ ಬಿಜೆಪಿ ಈವರೆಗೆ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ ನಿಜ. ಕಳೆದ 10 ವರ್ಷಗಳ ಹಿಂದೆ ನಮ್ಮ ಪಕ್ಷದ 3 ಸದಸ್ಯರಿದ್ದರು. ಈ ಬಾರಿ ನಮ್ಮ ಪಕ್ಷದಿಂದ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುತ್ತೇವೆ. ನಮ್ಮ ಪಕ್ಷದ ಜೊತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಮುನಿಸಿಕೊಂಡ ಅನೇಕ ಕಾರ್ಯಕರ್ತರು ನಮ್ಮ ಪಕ್ಷದ ಟಿಕೆಟ್ ಬಯಸಿ, ನಿರಂತರ ಸಂಪರ್ಕದಲ್ಲಿದ್ದಾರೆ. ಈವರೆಗೆ 75ಕ್ಕೂ ಅಧಿಕ ಅರ್ಜಿಗಳು ಬಂದಿವೆ.
ವಿಶ್ವನಾಥ ಪಾಟೀಲ ಮಾಡ್ಗುಳ್‌,
ಬಿಜೆಪಿ ತಾಲೂಕು ಅಧ್ಯಕ್ಷ

ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿರುವ ಜನಪರ ಯೋಜನೆಗಳೆ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತವೆ. ದಿ|ಮೆರಾಜುದ್ದೀನ್‌ ಎನ್‌.ಪಟೇಲರ ಅಭಿಮಾನಿಗಳು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಈ ಬಾರಿ 10ಕ್ಕೂ ಅಧಿಕ ವಾರ್ಡ್‌ಗಳಿಂದ ಸ್ಪರ್ಧಿಸುವುದಕ್ಕಾಗಿ ಅವಕಾಶ ಕೋರಿ ಕಾಂಗ್ರೆಸ್‌, ಬಿಜೆಪಿ ಪಕ್ಷದ ಕಾರ್ಯರ್ತರು ನಿರಂತರ ಸಂಪರ್ಕದಲ್ಲಿದ್ದಾರೆ. ಸದ್ಯ ನಮ್ಮ ಪಕ್ಷದಿಂದ 40 ಅರ್ಜಿ ಬಂದಿವೆ.
ಮಹೇಶ ಎಂ.ಅಗಡಿ,
ಜೆಡಿಎಸ್‌ ತಾಲೂಕು ಘಟಕ ಅಧ್ಯಕ್ಷ, ಹುಮನಾಬಾದ

ಹುಮನಾಬಾದ ಪುರಸಭೆಯಲ್ಲಿ ನಮ್ಮ ಪಕ್ಷ ಈವರೆಗೆ ಖಾತೆ ತೆರೆದಿಲ್ಲ ನಿಜ. ಆದರೇ ಈ ಬಾರಿ ಪ್ರತಿಯೊಂದು ವಾರ್ಡ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಅಧಿಕಾರ ಹಿಡಿಯುವುದು ಕಷ್ಟಸಾಧ್ಯ. ಆದರೆ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಪಕ್ಷಕ್ಕೆ ನಾವೇ ನಿರ್ಣಾಯಕರಾಗಿರುತ್ತೇವೆ. ಈವರೆಗೆ 27 ವಾರ್ಡ್‌ನಿಂದ 30ಅರ್ಜಿ ಬಂದಿವೆ.
ಡಿ.ಜಮೀಲಖಾನ್‌,
ಬಿಎಸ್‌ಪಿ ತಾಲೂಕು ಅಧ್ಯಕ್ಷರು, ಹುಮನಾಬಾದ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next