ಹುಮನಾಬಾದ: ಪುರಸಭೆ ಚುನಾವಣೆ ಮುಗಿದು ಈಗಾಗಲೇ ಫಲಿತಾಂಶ ಪ್ರಕಟಗೊಂಡಿದೆ. ಇನ್ನೇನು ಸರ್ಕಾರದ ನಿಯಮಾನುಸಾರ ಹೊಸ ಆಡಳಿತ ಮಂಡಳಿ ಸಭೆ ಸೇರಿ ನಗರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಇತ್ಯರ್ಥಪಡಿಸುವತ್ತ ಚಿತ್ತ ಹರಿಸಬೇಕಿದೆ.
Advertisement
ಕೋಟ್ಯಂತರ ವೆಚ್ಚವಾದರೂ ಉದ್ದೇಶಿತ ಕಾರ್ಯ ಕೈಗೊಡದೇ ಅಪೂರ್ಣ ಸ್ಥಿತಿಯಲ್ಲಿರುವ ಯುಜಿಡಿ ಕಾಮಗಾರಿ ಸಾರ್ವಜನಿಕರಿಗೆ ಬಳಕೆ ಬರುವ ರೀತಿಯಲ್ಲಿ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನೂತನ ಆಡಳಿತ ಮಂಡಳಿ ಮೇಲಿದೆ. ಅಂಬೇಡ್ಕರ್ ವೃತ್ತದಿಂದ ವಾಂಜ್ರಿ ವರೆಗಿನ ರಸ್ತೆ ವಿಸ್ತರಣೆ ಹಾಗೂ ವಿಭಜಕ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಗ್ರಿಲ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು.
Related Articles
Advertisement
ಸಿದ್ಧಾರ್ಥ ಬಡಾವಣೆಗೆ ಹೊಂದಿಕೊಂಡಿರುವ ಎನ್‌ಜಿಒ ಬಡಾವಣೆಯ ನಿವಾಸಿಗಳು ಅಶುದ್ಧ ನೀರಿ ಸಮಸ್ಯೆ ಎದುರಿಸುತ್ತಿದ್ದಾರೆ. ಬೈಪಾಸ್ ರಸ್ತೆಗೆ ಹೊಂದಿಕೊಂಡ ಹಿರೇಮಠ ಕಾಲೋನಿಯಲ್ಲಿ ಅಗತ್ಯ ಚರಂಡಿ ಸೌಲಭ್ಯವಿಲ್ಲದೇ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗಾಂನಗರ ಕಾಲೋನಿ ಚರಂಡಿ ವ್ಯವಸ್ಥೆ ಇದಕ್ಕೆ ಹೊರತಾಗಿಲ್ಲ.
ಹುಮನಾಬಾದ ಡಾ.ಅಂಬೇಡ್ಕರ ವೃತ್ತದಿಂದ ಜೇರಪೇಟೆ ಕ್ರಾಸ್ ವರೆಗೆ ಚರಂಡಿ ಸೌಲಭ್ಯವಿಲ್ಲದೇ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಮಧ್ಯದಲ್ಲಿ ದುರ್ನಾತ ಹೆಚ್ಚಿ ಜನ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಣವಾಗಿದೆ. ಅದೆಷ್ಟೋ ಸಂಗ್ರಹಗೊಂಡ ತ್ಯಾಜ್ಯ ಸಕಾಲಕ್ಕೆ ವಿಲೆವಾರಿ ಗೊಳಿಸದ ಕಾರಣ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳಿಗೆ ರೋಗಭೀತಿ ಕಾಡುತ್ತಿದೆ.
ಖಾಸಗಿ ವಾಹನ ನಿಲ್ದಾಣ: ಅತ್ಯಾಕರ್ಷಕವಾಗಿ ನಿರ್ಮಿಸಲಾದ ಪುರಸಭೆ ಕಚೇರಿ ಮುಂಭಾಗದಲ್ಲಿ ಲಾರಿಗಳು ನಿಲ್ಲುತ್ತಿರುವ ಕಾರಣ ಸಾರ್ವಜನಿಕರಿಗೆ ಕಚೇರಿ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಹಿಂದೆ ಅದೆಷ್ಟೋ ಬಾರಿ ಸಾಮಾನ್ಯ ನಡುವಳಿಕೆಯಾದರೂ ವಾಹನ ನಿಲುಗಡೆ ಮಾತ್ರ ರಾಜಾರೋಷ ಮುಂದುವರಿದಿದೆ.
ರಸ್ತೆ ವಿಸ್ತರಣೆ ಬಳಿಕ ಜನ ಅಂದುಕೊಂಡಂತೆ ಸೌಂದರ್ಯ ವೃದ್ಧಿ ಬದಲಿಗೆ ಗುಜರಿ ಅಂಗಡಿ, ಹೊಟೇಲ್ ಮತ್ತಿತರ ವ್ಯಾಪಾರಿಗಳು ಶಡ್ ಹಾಕಿದ್ದರಿಂದ ರಸ್ತೆ ಸೌಂದರ್ಯಕ್ಕೆ ಹೊಡೆತ ಬೀಳುತ್ತಿದೆ. ಅಗ್ನಿಕುಂಡ ಸಮೀಪ ನಿರ್ಮಿಸುತ್ತಿರುವ ಮಳಿಗೆ ಶೀಘ್ರ ಪೂರ್ಣಗೊಳಿಸಿದಲ್ಲಿ ಕಳೆದುಹೋದ ರಸ್ತೆ ಸೌಂದರ್ಯ ಮರುಕಳಿಸಲು ಸಾಧ್ಯವಾಗುತ್ತದೆ. ಅದೆಷ್ಟೋ ವಾರ್ಡ್‌ಗಳಲ್ಲಿ ಈಗಲೂ ಅಳವಡಿಕೆಯಾಗದ ನೀರಿನ ಪೈಪ್‌ಲೈನ್ ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳ್ಳಬೇಕು.
ಪುರಸಭೆಗೆ ಆಯ್ಕೆಗೊಂಡ ಸದಸ್ಯರ ಪೈಕಿ ಅಹ್ಮದ್ ಮೈನೋದ್ದಿನ್(ಅಪ್ಸರಮಿಯ್ಯ), ಗುಜ್ಜಮ್ಮ ಕನಕಟಕರ್, ಪಾರ್ವತಿಬಾಯಿ ಶೇರಿಕಾರ ಸೇರಿ 3 ಜನ ಮಾತ್ರ ಸದಸ್ಯರು ಹಳಬರಾಗಿದ್ದು, ಇವರಿಗೆ ಅನುಭವ ಇದೆ. ಇನ್ನುಳಿದ 24 ಸದಸ್ಯರು ಹೊಸಬರಾಗಿದ್ದು, ವಾರ್ಡ್ ಸಂಚರಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿ, ಬಗೆಹರಿಸುವತ್ತ ಚಿತ್ತ ಹರಿಸುವ ಮೂಲಕ, ಸದಾ ಫೈಲ್ ಹಿಡಿದು ಸ್ವರ್ಥಕ್ಕಾಗಿ ಅಲೆದಾಡುವ ಸದಸ್ಯರಿದ್ದಾರೆ ಎಂಬ ಅಪವಾದ ತಪ್ಪಿಸಬೇಕು.
ಈ ನಿಟ್ಟಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಆಡಳಿತ ಮಂಡಳಿಯನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸುವುದು ಸಹಜ. ಆದರೆ ವರ್ಷವಿಡೀ ತಮ್ಮ ಇಡೀ ಸಮಯವನ್ನು ಸನ್ಮಾನಗಳಿಗಾಗಿಯೇ ವಿನಿಯೋಗಿಸದೇ ಜನ ಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿ ಸದಸ್ಯರಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆ.
ಹಿಂದಿನಿಂದಲೂ ನೋಡತ್ತ ಬಂದಿದ್ದೇವೆ. ಚುನಾವಣಾ ಪೂರ್ವದಲ್ಲಿ ಇರುವ ವಿನಯ ಚುನಾವಣೆ ನಂತರ ಮಾಯವಾಗುತ್ತದೆ. ಗೆಲ್ಲುವ ಮುನ್ನ ಅಪ್ಪ, ಅಣ್ಣ, ಅವ್ವ, ಅಕ್ಕ, ತಂಗಿ ಎನ್ನುವ ಸದಸ್ಯರು ಗೆದ್ದ ನಂತರ ಸಮಸ್ಯೆ ಹೇಳಿಕೊಳ್ಳಲು ಹೋದರೆ ಆಯಿತು ನೋಡ್ತಿನಿ ಅಂತಾರೆ. ಚರಂಡಿ ಸೌಲಭ್ಯವಿಲ್ಲ, ಕಂಬಕ್ಕೆ ವಿದ್ಯುತ್ ದೀಪಗಳೇ ಇಲ್ಲ. ಈ ಬಾರಿ ಹಾಗಾಗಲಿಕ್ಕಿಲ್ಲ ಅಂದುಕೊಂಡಿದ್ದೀವಿ. ಏನಾಗುತ್ತೋ ಕಾದು ನೋಡಬೇಕು.• ಸಂತೋಷ ಭೋಲಾ,
ಹಿರೇಮಠ ಕಾಲೋನಿ ನಿವಾಸಿ