Advertisement

ಮಿನಿ ವಿಧಾನಸೌಧದಲ್ಲಿ ಸೌಕರ್ಯ ಮರೀಚಿಕೆ!

11:59 AM Mar 02, 2020 | Naveen |

ಹುಮನಾಬಾದ: ವಿವಿಧ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧಕ್ಕೆ ಹೋಗಬೇಕಾದರೆ ಮನೆಯಿಂದಲೇ ನೀರಿನ ಬಾಟಲಿ ತೆಗೆದುಕೊಂಡು ಹೋಗಬೇಕು. ಇಲ್ಲವೇ ಬಾಯಾರಿಕೆಯಿಂದ ಪರದಾಡುವುದು ಖಂಡಿತ. ಇನ್ನೂ ಅಲ್ಲಿ ಶೌಚಾಲಯ ಹೋಗಬೇಕೆಂದೆನಿಸಿದರೆ ಮರ, ಸಂದಿಗೊಂದಿ ಹುಡುಕುವುದು ಅನಿವಾರ್ಯವಾಗಿದೆ.

Advertisement

ಪಟ್ಟಣದ ಮಿನಿ ವಿಧಾನಸೌಧಕ್ಕೆ ಪ್ರತಿ ದಿನ ತಾಲೂಕಿನ ನೂರಾರು ಜನರು ನಾನಾ ಕೆಲಸದ ನಿಮಿತ್ತ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಜನರಿಗೆ ತಾಲೂಕಾಡಳಿತ ನೀರಿನ ವ್ಯವಸ್ಥೆ ಬಗ್ಗೆ ತಲೆಕಡೆಸಿಕೊಂಡಿಲ್ಲ.

ನೀರಿನ ಘಟಕ ಸ್ಥಗಿತ: ಈ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಸುದ್ದಿ ಪ್ರಕಟಗೊಂಡ ನಂತರ ಮಿನಿ ವಿಧಾನಸೌಧದ ಹೊರ ಪ್ರದೇಶದಲ್ಲಿ ಕುಡಿಯುವ ನೀರಿನ ಕಟ್ಟೆ ನಿರ್ಮಿಸಿ ಟ್ಯಾಂಕರ್‌ ಅಳವಡಿಸಿ ನೀರು ಪೂರೈಸಲಾಗುತ್ತಿತ್ತು. ಆದರೆ, ಇದು ಸದ್ಯ ಸ್ಥಗಿತಗೊಂಡಿದೆ. ಅಲ್ಲದೆ, ಕಚೇರಿ ಒಳ ಪ್ರದೇಶದಲ್ಲಿಯೂ ಒಂದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಳವಡಿಸಲಾಗಿತ್ತು. ಅದು ಕೂಡ ದುರಸ್ತಿ ಹಿನ್ನೆಲೆಯಲ್ಲಿ ಬಂದಾಗಿದ್ದು, ಕಚೇರಿಗೆ ಬರುವ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕ ಶೌಚಾಲಯವಿಲ್ಲ: ಇಲ್ಲಿ ಶೌಚಾಲಯ ಸಮಸ್ಯೆ ಹೇಳತೀರದು. ಪುರುಷರು ಹೇಗೋ ಹೊರಹೋಗಿ ಶೌಚ ಮಾಡುತ್ತಾರೆ. ಆದರೆ ಮಹಿಳೆಯರು ಪರದಾಡುವಂತಾಗಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ದೂರುತ್ತಿದ್ದಾರೆ. ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ ಕಾರ್ಯಾಲಯ, ಉಪ ನೋಂದಣಿ ಕಚೇರಿ, ದಾಖಲೆಗಳ ಕಚೇರಿ, ಭೂ ಸರ್ವೇ ಇಲಾಖೆ, ಭೂಮಿ ಕೇಂದ್ರ, ಖಜಾನೆ ಇಲಾಖೆ, ಚುನಾವಣೆ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿನಿತ್ಯ ಕೆಲಸಕ್ಕೆ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ಜನರು ಇಲ್ಲಿಗೆ ಬರುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಜತೆಯಲ್ಲಿ ಶೌಚಾಲಯ ಸಮಸ್ಯೆ ಹೆಚ್ಚಿದೆ.

ಅಧಿಕಾರಿಗಳಿಗೆ ಕೆಲವು ಕಡೆ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಸಾರ್ವಜನಿಕರಿಗೆ ಮಾತ್ರ ಶೌಚಾಲಯ ಇಲ್ಲದಂತಾಗಿದೆ. ಮಿನಿ ವಿಧಾನಸೌಧದ ಹಿಂದಿನ ಪ್ರದೇಶದಲ್ಲಿ ಕಳೆದ ಸುಮಾರು ವರ್ಷಗಳ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ತಹಶೀಲ್ದಾರರು ಬದಲಾಗುತ್ತಿದ್ದಾರೆ. ಆದರೆ, ಶೌಚಾಲಯ ಮಾತ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಕೂಗು ದಟ್ಟವಾಗಿದೆ.

Advertisement

ಮುಂದಿನ ಒಂದು ವಾರದಲ್ಲಿ ಸಾರ್ವಜನಿಕ ಶೌಚಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ತಾಪಂ ಇಒ ಅವರಿಗೆ ತಿಳಿಸಲಾಗಿದ್ದು, ನೀರಿನ ಘಟಕ ಶೀಘ್ರ ಪ್ರಾರಂಭಿಸಲಾಗುವುದು.
ನಾಗಯ್ನಾ ಹಿರೇಮಠ,
ತಹಶೀಲ್ದಾರ್‌

ಮಿನಿ ವಿಧಾನಸೌಧಕ್ಕೆ ಆಗಮಿಸುವ ಜನರಿಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತಹಶೀಲ್ದಾರರು ಮುಂದಾಗಬೇಕು. ದೂರದ ಊರುಗಳಿಂದ ಬರುವ ಜನರು ಒಂದು ಲೀಟರ್‌ ಕುಡಿಯವ ನೀರಿಗಾಗಿ 20 ರೂ. ಖರ್ಚುಮಾಡುತ್ತಿದ್ದಾರೆ. ಅಲ್ಲದೆ, ವಾಹನಗಳಲ್ಲಿ ಬರುವ ಜನರಿಗಾಗಿ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ, ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆಗಳು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಬೇಕು.
ಮನೋಜ ಸಿತಾಳೆ,
ಕರವೇ ತಾಲೂಕು ಅಧ್ಯಕ್ಷ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next