ಹುಮನಾಬಾದ: ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಕಠಿಣ ಪರಿಶ್ರಮದೊಂದಿಗೆ ಸ್ಪರ್ಧೆಯೊಡ್ಡದಿದ್ದರೆ ಸಾಧನೆ ಮಾಡುವುದು ಅಸಾಧ್ಯ ಎಂದು ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ಯಲಾಲ್ ಶಿಕ್ಷಣ ದತ್ತಿಯ ಸರ್ವೋದಯ ಪದವಿ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕೇವಲ ಶಾಲೆಗೆ ಪ್ರವೇಶ ಕೊಡಿಸಿದ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ ಪಾಲಕರು ಮಕ್ಕಳ ಕ್ಷಣಕ್ಷಣದ ಚಲನವಲನಗಳ ಮೇಲೆ ವಿಶೇಷ ನಿಗಾ ಇಡಬೇಕು. ಉತ್ತಮ ವ್ಯಾಸಂಗ ವಿಷಯದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ಗೆ ಜೋತು ಬೀಳದೇ ಮಕ್ಕಳ ಆಸಕ್ತಿಯನ್ನರಿತು ಉನ್ನತ ಶಿಕ್ಷಣ ಕೊಡಿಸಬೇಕೆ ಹೊರತು ತಮ್ಮ ಇಚ್ಛೆಗನುಸಾರ ವ್ಯಾಸಂಗ ಮಾಡುವಂತೆ ಪಾಲಕರು ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು.
ಸಾಧನೆ ವಿಷಯದಲ್ಲಿ ಯಾವತ್ತೂ ಅಲ್ಪದರಲ್ಲೇ ತೃಪ್ತಿಪಡದೇ ಹೆಚ್ಚಿನದನ್ನು ಸಾಧಿಸಲು ಯತ್ನಿಸಬೇಕು. ವೈಯಕ್ತಿಕವಾಗಿ ತಮ್ಮ ಜೀವನದ ವಿಚಾರವನ್ನೇ ಅವಲೋಕಿಸಿದಲ್ಲಿ ಇರುವ ಶಿಕ್ಷಕ ಹುದ್ದೆ ಸಾಕೆಂದುಕೊಂಡಿದ್ದರೆ ಇಂದು ತಹಶೀಲ್ದಾರ್ ಹುದ್ದೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಪ್ರಯತ್ನ ಇನ್ನುಳಿದವರಿಂದಲೂ ನಡೆಯಬೇಕು ಎಂದರು. ತಾವು ಕಲಿಯುತ್ತಿದ್ದ ಜೇವರ್ಗಿ ತಾಲೂಕು ಮಂಗಳೂರು ಗ್ರಾಮಕ್ಕೆ ನಮ್ಮ ಬಾಲ್ಯದ ಅವಧಿಯಲ್ಲಿ ಮಾತ್ರ ಅಲ್ಲ ಈಗಲೂ ಬಸ್ ಸೌಲಭ್ಯವಿಲ್ಲ ಎಂದು ಅಲ್ಲಿನ ವ್ಯವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘ ಇನ್ನೂ ಬಲಿಷ್ಟಗೊಳ್ಳಬೇಕು. ಸ್ವಂತ ನಿವೇಶನ ಪಡೆದು ಕಟ್ಟಡ ವ್ಯವಸ್ಥೆ ಮಾಡಿಕೊಳ್ಳಬೇಕು. ಸಂಘದ ಚಟುವಟಿಕೆಗಳು ವರ್ಷಕ್ಕೊಮ್ಮೆ ಪ್ರತಿಭಾ ಪುರಸ್ಕಾರ ಆಯೋಜನೆಗೆ ಸೀಮಿತಗೊಳ್ಳದಿರಲಿ. ವಾರ್ಷಿಕ ಕ್ರಿಯಾಯೋಜನೆ ರೂಪಿಸಿದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಆರ್ಥಿಕ ನೆರವಿನ ಜೊತೆಗೆ ಉನ್ನತ ವ್ಯಾಸಂಗದಂತಹ ಹಂತದಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದರೆ ಅವರಿಗೂ ಪ್ರೋತ್ಸಾಹ ಆಗುತ್ತಿತ್ತು ಎಂದರು. ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಶಶಿಧರ ಪಾಟಿಲ ಮಾತನಾಡಿ, ಗಣ್ಯರ ಸಲಹೆ ಕಾರ್ಯರೂಪಕ್ಕೆ ತರಲು ಶಕ್ತಿಮೀರಿ ಪ್ರಯತ್ನ ಮಾಡಲಾಗುವುದು ಎಂದರು. ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸಚ್ಚಿದಾನಂದ ಮಠಪತಿ, ಸಂಘದ ಗೌರವಾಧ್ಯಕ್ಷ ಡಾ|ನಾಗನಾಥ ಹುಲಸೂರೆ, ಯಲಾಲ್ ಶಿಕ್ಷಣ ಮುಖ್ಯ ದತ್ತಿ ನಾಗಶಟ್ಟಿ ಯಲಾಲ್ ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಓಂಕಾರ ಅರುಣಕುಮಾರ, ಪ್ರಶಾಂತ ಬಸ್ಸಯ್ಯ, ಸೌಮ್ಯ ಬಸವರಾಜ, ರೇಣುಕಾ ಗಣಪತಿ, ಸಾಗರ ಶಿವಕುಮಾರ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಚೇತನ ರಾಜಕುಮಾರ, ನಾಗಪ್ರಿಯಾ ರಾಜಕುಮಾರ, ನೀಲೇಶ ನಂದಕುಮಾರ ಮರೂರ, ಜ್ಯೋತಿ ರೇವಶೆಟ್ಟಿ, ಸ್ಫೂರ್ತಿ ಭದ್ರಪ್ಪ, ರೋಹಿಣಿ ಭೀಮಣ್ಣ ದೇವಣಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಮುಖ ಪದಾಧಿಕಾರಿಗಳಾದ ಭಕ್ತರಾಜ ಚಿತ್ತಾಪುರೆ, ಮಡೆಪ್ಪ ಕುಂಬಾರ, ಬಸವರಾಜ ಮಂಗಲಗಿ, ರಮೇಶಸಲಗರ, ಪ್ರಭು ಕಣ್ಸನಾಳ್, ಮಲ್ಲಿಕಾರ್ಜುನ ಹಚ್ಚೆ, ಕಾಶೀನಾಥ ಕೂಡ್ಲಿ, ಲೋಕೇಶರೆಡ್ಡಿ, ಮಲ್ಲಿಕಾರ್ಜುನ ಸಂಗಮಕರ್, ಗೌರಮ್ಮ ಬಾಲಕುಂದೆ, ಪಾರ್ವತಿ ಬಾಳೂರೆ, ಗುರುಬಾಯಿ, ಜೈಶ್ರೀ ಕಾಳಗಿ, ಸುಭಾಷ ಪಾಟೀಲ, ರಾಕುಮಾರ ಚಳಕಾಪೂರೆ, ಶಿವಕುಮಾರ, ಚನ್ನಪ್ಪ, ಶಾಂತವೀರ ಯಲಾಲ್ ಮತ್ತಿತರರು ಇದ್ದರು.
ನಂದಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀಕಾಂತ ಸೂಗಿ ಪ್ರಾಸ್ತಾವಿಕ ಮಾತನಾಡಿದರು. ಸದಾಶಿವಯ್ಯ ಹಿರೇಮs್ ನಿರೂಪಿಸಿದರು. ರೇವಶೆಟ್ಟಿ ತಂಗಾ ವಂದಿಸಿದರು.