Advertisement

ಕಬಿರಾಬಾದವಾಡಿಗೆ ಬೇಕು ಚರಂಡಿ ಸೌಲಭ್ಯ

10:21 AM Apr 26, 2019 | Naveen |

ಹುಮನಾಬಾದ: ಬೇನಚಿಂಚೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಬಿರಾಬಾದವಾಡಿ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕ ತ್ಯಾಜ್ಯ, ಮಲಿನ ನೀರು ರಸ್ತೆ ಮಧ್ಯದಲ್ಲಿ ಸಂಗ್ರಹಗೊಂಡು ಗ್ರಾಮಸ್ಥರಲ್ಲಿ ರೋಗಭೀತಿ ಸೃಷ್ಟಿಸಿದೆ.

Advertisement

ಸುಮಾರು 3 ಸಾವಿರ ಜನಸಂಖ್ಯೆ, 5 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಗ್ರಾಮದ ಬಹುತೇಕ ಓಣಿಗಳಲ್ಲಿ ಸಿಮೇಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಗ್ರಾಮಸ್ಥರಿಗೆ ಅತ್ಯವಶ್ಯಕವಾಗಿರುವ ಚರಂಡಿ ನಿರ್ವಹಣೆ ದೋಷದಿಂದಾಗಿ ಸ್ವಚ್ಛತೆ ಕೊರತೆ ಕಾಡುತ್ತಿದೆ. ಬೊಮ್ಮಗೊಂಡೇಶ್ವರ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆಯಷ್ಟೆ ನಿರ್ಮಿಸಿದ್ದ ಚರಂಡಿಗಳಲ್ಲಿ ಮಣ್ಣು, ಕಸಕಡ್ಡಿ ತುಂಬಿ ಮುಚ್ಚಿ ಹೋಗಿದ್ದು, ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಇದರಿಂದ ಗ್ರಾಮದ ನಿವಾಸಿಗಳ ತ್ಯಾಜ್ಯ, ಮಲಿನ ನೀರು ರಸ್ತೆಮಧ್ಯದಲ್ಲಿ ಪಾಚಿಕಟ್ಟಿ ರೋಗಭೀತಿಗೆ ಕಾರಣವಾಗಿದೆ.

ಊರಿನ ಹನುಮಾನ ದೇವಸ್ಥಾನ ಹಾಗೂ ಬೊಮ್ಮಗೋಂಡೆಶ್ವರ ವೃತ್ತ‌ದಲ್ಲಿ ವರ್ಷದ ಹಿಂದೆ ಲಕ್ಷಾಂತ ರೂ. ವೆಚ್ಚ ಮಾಡಿ ಅಳವಡಿಸಿದ್ದ ಹೈಮಾಸ್ಟ್‌ ದೀಪಗಳು ಬೆಳಕು ನೀಡುತಿಲ್ಲ. ಈ ಕುರಿತು ಪಿಡಿಒ ಹಾಗೂ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ಮಹಿಳೆಯರು, ಮಕ್ಕಳು ರಾತ್ರಿ ವೇಳೆ ಕತ್ತಲಲ್ಲೇ ಅಲೆದಾಡಬೇಕಾದ ಸ್ಥಿತಿ ಅನಿವಾರ್ಯವಾಗಿದೆ. ಮಳೆಗಾಲ, ಬೇಸಿಗೆಯಲ್ಲಿ ಯಾವುದಾದರೂ ಊರುಗಳಿಗೆ ತೆರಳುವ ಮುನ್ನ ಬಸ್‌ ಬರುವವರೆಗೆ ವಿಶ್ರಾಂತಿ ಪಡೆಯಲು ಒಂದು ತಂಗುದಾಣ ಇಲ್ಲದ್ದರಿಂದ ಮಳೆಗಾಲದಲ್ಲಿ ಮಳೆ, ಬೇಸಿಗೆಯಲ್ಲಿ ಕಡು ಬಿಸಿಲಲ್ಲೇ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

ಪಾಳುಬಿದ್ದ ಶುದ್ಧ ನೀರಿನ ಘಟಕ: ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸಂಬಂಧ ಕ್ಷೇತ್ರದ ಶಾಸಕರ ಸಲಹೆ ಮೇರೆಗೆ ಅಳವಡಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೇವಲ ಶೆಡ್‌ ನಿರ್ಮಿಸುವುದಕ್ಕೆ ಸೀಮಿತವಾಗಿದೆ. ಘಟಕ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದ್ದು, ಅಪೂರ್ಣ ಕಾಮಗಾರಿಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕಿದೆ. ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಮಳೆಗಾಲದಲ್ಲಿ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸಂಬಂಧ‌ಪಟ್ಟವರು ಹಿಂದೆಂದಿಗಿಂತಲೂ ಈಗ ಹೆಚ್ಚು ಮುತುವರ್ಜಿ ವಹಿಸಬೇಕಿದೆ.

ಊರಿನ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

Advertisement

ಗ್ರಾಮದಲ್ಲಿ ನಿರ್ಮಿಸಿದ ಚರಂಡಿ ತ್ಯಾಜ್ಯ ತುಂಬಿ ಮುಚ್ಚಿವೆ. ಸಂಬಂಧಿಸಿದವರು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರ ಆರೋಗ್ಯ ಕಾಪಾಡಲು ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಪ್ರಯಾಣಿಕರ ಆಶ್ರಯಕ್ಕಾಗಿ ತಂಗುದಾಣ ನಿರ್ಮಿಸಬೇಕು.
• ಮಹೇಶ, ಗ್ರಾಮಸ್ಥ

•ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next