Advertisement

ಕಳಪೆ ಕಾಮಗಾರಿಗೆ ಶಾಸಕರ ಅಸಮಾಧಾನ

11:50 AM Feb 03, 2020 | Naveen |

ಹುಮನಾಬಾದ: ಪಟ್ಟಣದ ವಿವಿಧೆಡೆ ನಡೆಯುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಶಾಸಕ ರಾಜಶೇಖರ ಪಾಟೀಲ ರವಿವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಳಪೆ ಕಾಮಗಾರಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ನಡೆಯಿತು.

Advertisement

ಪಟ್ಟಣದ ಬಸವನಗರ, ಶಿವನಗರ, ಕಲ್ಲೂರ್‌ ರಸ್ತೆ, ಸನಾ ಕಾಲೂನಿ, ಶಿವಪೂರ ಗಲ್ಲಿ, ತಾಂಡೂರ್‌ ಗಲ್ಲಿ ಸೇರಿದಂತೆ ವಿವಿಧಡೆ ಭೇಟಿ ನೀಡಿ ಎಸ್‌ಎಫ್‌ಸಿ 14ನೇ ಹಣಕಾಸು ಮತ್ತು ನಗರೋತ್ಥಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಸಿಸಿ ರಸ್ತೆ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ರಸ್ತೆಗಳ ಗುಣಮಟ್ಟದಲ್ಲಿ ಕಳಪೆ ಕಂಡು ಬಂದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿ, ಇಂಜಿನಿಯರ್‌, ಗುತ್ತಿಗೆದಾರರನ್ನು ಶಾಸಕ ಪಾಟೀಲ ತರಾಟೆಗೆ ತೆಗೆದುಕೊಂಡರು.

ಗುಣಮಟ್ಟಕ್ಕೆ ಆದ್ಯತೆ ನೀಡಿ: ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಬೇಡಿ ಬೇಡಿ ಅನುದಾನ ತರಲಾಗುತ್ತಿದೆ. ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣವನ್ನು ಸುಂದರಗೊಳಿಸಬೇಕು ಎಂಬ ನಿಟ್ಟಿನಲ್ಲಿ ಅನುದಾನ ತರಲಾಗುತ್ತಿದ್ದು, ಕಳಪೆ ಕಾಮಗಾರಿಗೆ ಯಾರೂ ಸ್ಪಂದಿಸಬಾರದು. ಅಧಿಕಾರಿಗಳು ಸೂಕ್ತ ಸಮಯಕ್ಕೆ ಭೇಟಿನೀಡಿ ಗುಣಮಟ್ಟ ಪರೀಕ್ಷೆ ನಡೆಸಬೇಕು. ಸರ್ಕಾರದ ಅನುದಾನ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚಿಸಿದರು.

ಥರ್ಡ್‌ ಪಾರ್ಟಿ ಪರೀಶಿಲನೆ: ವಿವಿಧೆಡೆ ನಡೆದ ಕಾಮಗಾರಿಗಳು ಮೇಲ್ನೋಟಕ್ಕೆ ಕಳಪೆ ಎಂದು ಕಂಡುಬರುತ್ತಿವೆ. ಕಾಮಗಾರಿ ಮಾಡಿದ ಕೆಲ ತಿಂಗಳಲ್ಲಿ ರಸ್ತೆಗಳು ಹಾಳಾಗುತ್ತಿದ್ದು, ಈ ಕುರಿತು ಮೇಲಾಧಿಕಾರಿಗಳ ಜತೆಗೆ ಚರ್ಚಿಸಿ ಥರ್ಟ್‌ ಪಾರ್ಟಿ ಮೂಲಕ ಪರಿಶೀಲನೆ ನಡೆಸಲಾಗುವುದು. ಗುಣಮಟ್ಟದಲ್ಲಿ ಸಮಸ್ಯೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ಜನರ ವಿರುದ್ಧ ಕ್ರಮ ಕೈಗೊಳ್ಳಿ: ಪಟ್ಟಣದ ವಿವಿಧೆಡೆ ಪುರಸಭೆ ರಸ್ತೆ ಹಾಗೂ ಚರಂಡಿಗಳ ಮೇಲೆ ಮನೆ ಅಥವಾ ಕಂಪೌಂಡ್‌ ನಿರ್ಮಿಸಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕ ಪಾಟೀಲ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಎಲ್ಲಕಡೆಗಳ ಚರಂಡಿಗಳು ಸ್ವಚ್ಛಗೊಳ್ಳಬೇಕು. ಯಾವ ಬಡಾವಣೆಗಳಲ್ಲೂ ಗಬ್ಬು ವಾಸನೆ ಬರದಂತೆ ನೋಡಿಕೊಳ್ಳಬೇಕು. ರಸ್ತೆ, ಚರಂಡಿ ಮೇಲೆ ಕಟ್ಟಡ ನಿರ್ಮಿಸಿದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ಮೌನ ವಹಿಸದೇ ಅಂತಹ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಪುರಸಭೆ ಅಧಿಕಾರಿಗಳು ಪಟ್ಟಣದ ವಿವಿಧೆಡೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಎಲ್ಲಕಡೆಗಳಲ್ಲಿ ಸ್ವಚ್ಛತೆ ಕಂಡುಬರಬೇಕು. ಅಲ್ಲದೆ, ಪಟ್ಟಣದ ನಿವಾಸಿಗಳು ಕೂಡ ತಮ್ಮ ಬಡಾವಣೆ ಸ್ವಚ್ಛತೆಗಾಗಿ ಎಲ್ಲರೂ ಒಂದುಗೂಡಿ ಕೆಲಸ ಮಾಡಬೇಕು. ತಮ್ಮ ಮನೆಗಳ ಸುತ್ತಲ್ಲಿನ ಪ್ರದೇಶದಲ್ಲಿ ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಿದರೆ ಇಡೀ ಪಟ್ಟಣವೇ ಸುಂದರವಾಗಿ ಕಾಣುತ್ತದೆ ಎಂದು ಶಾಸಕ ಪಾಟೀಲ ವಿವಿಧ ಬಡಾವಣೆ ಜನರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next