Advertisement

ವಿಶ್ವಾಸಕ್ಕೆ ಮಾದರಿ ಹಡಪದ ಅಪ್ಪಣ್ಣನವರು

01:03 PM Aug 14, 2019 | Naveen |

ಹುಮನಾಬಾದ: ವಿಶ್ವಾಸಕ್ಕೆ ಇನ್ನೊಂದು ಹೆಸರೇ ಶರಣ ಹಡಪದ ಅಪ್ಪಣ್ಣನವರು. ಬಸವಣ್ಣನವರು ತಮ್ಮ ಖಾಸಗಿ ವಿಷಯದಲ್ಲೂ ಹಡಪದ ಅಪ್ಪಣ್ಣನವರ ಮೇಲೆ ಅತ್ಯಂತ ವಿಶ್ವಾಸ ಹೊಂದಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಸಂಗಮೇಶ ದೇವರು ಹೇಳಿದರು.

Advertisement

ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಹಡಪದ ಅಪ್ಪಣ್ಣನವರ 885ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಡಪದ ಅಪ್ಪಣ್ಣನವರ ಮೇಲೆ ಅತ್ಯಂತ ವಿಶ್ವಾಸ ಹೊಂದಿದ್ದ ಕಾರಣ, ಅನೇಕ ಶರಣರಿದ್ದರೂ ಆಪ್ತ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳುವ ಪ್ರಸಂಗದಲ್ಲಿ ಅಪ್ಪಣ್ಣನವರನ್ನೇ ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಡಪದ, ಗಾಣಿಗ, ಕಂಬಾರ, ಕುಂಬಾರ, ಅಕ್ಕಸಾಲಿಗ, ಮಡಿವಾಳ, ಸಮಗಾರ, ನೂಲುಗಾರ, ಕುರುಬ ಇವೆಲ್ಲ ಕಾಯಕದ ಹೆಸರೇ ಹೊರತು ಜಾತಿಗಳಲ್ಲ ಎಂದರು. ಎದ್ದ ತಕ್ಷಣ ಗಾಣಿಗರ ಮುಖ, ಹಡಪದರ ಮುಖ ನೋಡಿದರೆ ಕೆಲಸಗಳೆಲ್ಲವೂ ಕೆಡುತ್ತವೆ ಎಂಬುದು ಶುದ್ಧ ಅಪನಂಬಿಕೆ ಎಂದರು.

ನಮ್ಮ ಮನೆ ಹಿಂದೆ ಹಡಪದರು, ಎದುರಿಗೆ ಗಾಣಿಗರ ಮನೆ ಇದೆ. ಪ್ರತಿನಿತ್ಯ ಎದ್ದ ತಕ್ಷಣ ಅವರ ದರ್ಶನವೇ ಆಗುತ್ತದೆ. ಅವರ ದರ್ಶನ ಭಾಗ್ಯದಿಂದಲೇ ನಮ್ಮ ತಂದೆ ದಿ.ಬಸವರಾಜ ಪಾಟೀಲ ಅವರು ಮೂರು ಬಾರಿ ಸಚಿವರಾದರು. ಸಹೋದರ ರಾಜಶೇಖರ ಪಾಟೀಲ ಶಾಸಕ ಹುದ್ದೆಯೊಂದಿಗೆ ಸಂಪುಟ ದರ್ಜೆ ಸಚಿವರಾದರು. ಅವರ ಸಹೋದರ ನಾನೀಗ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯನಾಗಿದ್ದೇನೆ. ನನ್ನ ಮತ್ತೂಬ್ಬ ಸಹೋದರ ಭಿಮರಾವ್‌ ಪಾಟೀಲ ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷರಾಗಿದ್ದಾರೆ. ನಮ್ಮ ಪ್ರಕಾರ ಪಾಟೀಲ ಈ ಮಟ್ಟಕ್ಕೆ ಬೆಳೆಯಲು ಗಾಣಿಗರು ಮತ್ತು ಹಡಪದರ ಮನೆ ನಮ್ಮ ಅಕ್ಕಪಕ್ಕದಲ್ಲಿರುವುದೇ ಕಾರಣ. ಹಾಗೆ ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.

Advertisement

ಸಂಘದ ತಾಲೂಕು ಘಟಕ ಅಧ್ಯಕ್ಷ ಶಿವಶಂಕರ ಹಡಪದ ಮಾತನಾಡಿ, ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಹೇಳಿದಂತೆ ಶಿಕ್ಷಣ-ಸಂಘಟನೆ-ಹೋರಾಟದಿಂದ ಮಾತ್ರ ಸಮುದಾಯದ ಸರ್ವಾಂಗೀಣ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಕುಲ ಬಾಂಧವರು ತಮ್ಮ ಮಕ್ಕಳನ್ನು ಸಾಕ್ಷರರಾಗಿಸಬೇಕು ಎಂದರು. ಹಿಂದಿನ ಸರ್ಕಾರ ಅವಧಿಯಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತಾಗಲು ಸಿದ್ಧರಾಮಯ್ಯ ಅವರೇ ಪ್ರಮುಖ ಕಾರಣ ಎಂದರು. ತಾಲೂಕು ಕೇಂದ್ರದಲ್ಲಿ ಸಮುದಾಯ ಭವನಕ್ಕಾಗಿ 1ಎಕರೆ ಜಮೀನು, ಕಟ್ಟಡ ನಿರ್ಮಾಣಕ್ಕೆ ರೂ.25ಲಕ್ಷ ಅನುದಾನ ಬಿಡುಗಡೆಗೊಳಿಸಬೇಕು.

ಅವಮಾನಕರ ಪದ ಬಳಸುವವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು. ನಮ್ಮ ಸಮಾಜಕ್ಕೂ ಪುರಸಭೆ, ತಾಪಂ, ಜಿಪಂ ಮತ್ತಿತರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದರು. ಈ ಎಲ್ಲದರ ಜೊತೆ ರದ್ದುಗೊಂಡಿರುವ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮವನ್ನು ಪುನಃ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆಯಳ್ಳ ಮನವಿಪತ್ರವನ್ನು ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಅವರಿಗೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ಗಣ್ಯರು ಹಾಗೂ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಿರಸ್ತೇದಾರ್‌ ಕರೀಂಸಾಬ್‌, ಕಲಬುರಗಿ ವಿಭಾಗೀಯ ಅಧ್ಯಕ್ಷ ವೀರಣ್ಣ ಹಡಪದ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುರಾವ್‌ ತರನಳ್ಳಿ, ಚಿಟಗುಪ್ಪ ತಾಲೂಕು ಅಧ್ಯಕ್ಷ ಶ್ರೀಧರ ಹಡಪದ, ಭಾಲ್ಕಿ ತಾಲೂಕು ಅಧ್ಯಕ್ಷ ಬಸವರಾಜ ಹಡಪದ, ಬಸವಕಲ್ಯಾಣದ ಭೀಮಶಾ ಹಡಪದ, ರಾಜೇಶ್ವರದ ಉದಯಕುಮಾರ ಇಸ್ಲಂಪೂರೆ, ಮಚೇಂದ್ರನಾಥ ಹಡಪದ, ಸೂರ್ಯಕಾಂತ ಹಡಪದ, ರಮೇಶ ಹಡಪದ ಇದ್ದರು. ಸೂರ್ಯಕಾಂತ ಪ್ರಾರ್ಥಿಸಿದರು. ಗೋರಖನಾಥ ಹಡಪದ ಸ್ವಾಗತಿಸಿದರು. ಮಲ್ಲಿಕಾರ್ಜುನ ನೀಲಕಂಠೆ ನಿರೂಪಿಸಿದ‌ರು.

Advertisement

Udayavani is now on Telegram. Click here to join our channel and stay updated with the latest news.

Next