Advertisement

ವಿದೇಶದಿಂದ ಬಂದವರ ಮೇಲೆ ನಿಗಾ

01:34 PM Mar 16, 2020 | Naveen |

ಹುಮನಾಬಾದ: ಚಿಟಗುಪ್ಪ ತಾಲೂಕಿನ ಎರಡು ಗ್ರಾಮಗಳಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ದುಬೈಯಿಂದ ಬಂದ ಐದು ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

Advertisement

ನಿರ್ಣಾ ಗ್ರಾಮದ 3 ಜನ ಹಾಗೂ ರಾಮಪೂರ ಗ್ರಾಮದ ಇಬ್ಬರು ಮೂರ್ನಾಲ್ಕು ದಿನಗಳ ಹಿಂದೆ ದುಬೈದಿಂದ ಬಂದಿರುವ ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಆರೋಗ್ಯ ಕುರಿತು ವಿಚಾರಿಸಿದ್ದಾರೆ. ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಕಂಡು ಬಂದ ಕೂಡಲೆ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ಒಂದು ವಾರ ಕಾಲ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ, ಜನರು ಹೆಚ್ಚಿರುವ ಕಡೆಗಳಲ್ಲಿ, ಕುಟುಂಬದವರ ಸಮೀಪದಲ್ಲಿ ಇರದಂತೆ ಸೂಚಿಸಲಾಗಿದೆ. ಒಂದೇ ದಿನದಲ್ಲಿ ಕೊರೊನಾ ವೈರಸ್‌ ರೋಗದ ಲಕ್ಷಣಗಳು ಕಂಡು ಬರುವುದಿಲ್ಲ. ಕಾರಣ ವ್ಯಕ್ತಿಗೆ ಬರುವ ಸೋಂಕು ಬೇರೆಯವರಿಗೆ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಹಿತಿ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ ಮೈಲಾರೆ ಮಾಹಿತಿ ನೀಡಿದ್ದಾರೆ.

ಶಕರಗಂಜವಾಡಿ ಗ್ರಾಮ: ತಾಲೂಕಿನ ಶಕರಗಂಜವಾಡಿ ಗ್ರಾಮದಕ್ಕೆ ಅಬುಧಾಬಿ ದೇಶದಿಂದ ಬಂದ ಇಬ್ಬರು ಆರೋಗ್ಯವಾಗಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಅವರಿಗೆ ಕೂಡ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕುಟುಂಬದವರು ಹಾಗೂ ಜನರೊಂದಿಗೆ ಬೆರೆಯದಂತೆ ತಿಳಿಸಲಾಗಿದೆ.

ಒಂದು ವಾರದ ಹಿಂದೆ ಹಣಮಂತವಾಡಿ ಗ್ರಾಮದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ಆ ವ್ಯಕ್ತಿ ವಿದೇಶದಿಂದ ಬಂದಿಲ್ಲ. ಬದಲಾಗಿ ಬೆಂಗಳೂರಿನಿಂದ ಬಂದಿದ್ದು, ಅವರಲ್ಲಿ ಕೂಡ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಾಲೂಕು ಆರೋಗ್ಯಾ ಧಿಕಾರಿ ಅಶೋಕ ಮೈಲಾರೆ ಮಾಹಿತಿ ನೀಡಿದ್ದಾರೆ.

ಕಲ್ಯಾಣ ಮಂಟಪ ಬಂದ್‌: ಮುಂದಿನ ಒಂದು ವಾರ ಕಾಲ ಪಟ್ಟಣದ ವಿವಿಧ ಫಂಕ್ಷನ್‌ ಹಾಲ್‌, ಕಲ್ಯಾಣ ಮಂಟಪಗಳಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು ಎಂದು ಪಟ್ಟಣದ ಪುರಸಭೆ ಅಧಿಕಾರಿಗಳು ಕಲ್ಯಾಣ ಮಂಟಪಗಳ ಮುಖ್ಯಸ್ಥರಿಗೆ ನೋಟಿಸ್‌ ನೀಡಿ ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್‌ ಹಾವಳಿ ಕಡಿಮೆ ಆಗುವವರೆಗೆ ಯಾವುದೇ ಕಾರ್ಯಕ್ರಮಗಳು ನಡೆಯದಂತೆ ನೋಡಿಕೊಳ್ಳಿ. ಕಾನೂನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಶಾಯಿ ತಿಳಿಸಿದ್ದಾರೆ.

Advertisement

ಹಳ್ಳಿಖೇಡದಲ್ಲಿ ಮುಂಜಾಗ್ರತೆ ಕ್ರಮ: ಹಳ್ಳಿಖೇಡ(ಬಿ) ಪಟ್ಟಣದಲ್ಲಿ ರವಿವಾರ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು. ಕೊರೊನಾ ವೈರಸ್‌ ಸೇರಿದಂತೆ ಇತರೆ ಯಾವುದೇ ಸೋಂಕು ಹರಡದಂತೆ ಎಲ್ಲ ಕಡೆಗಳಲ್ಲಿ ಕ್ರಿಮಿನಾಶಕ ಸಿಂಪಡನೆ ಮಾಡಲಾಗಿದೆ. ಅಲ್ಲದೆ, ಸೋಮವಾರದಿಂದ ಬೀದಿಬದಿ ಆಹಾರ ಮಾರಾಟ ನಿಷೇಧಿಸಲಾಗಿದೆ.

ಹಳ್ಳಿಖೇಡ ಪಟ್ಟಣದಲ್ಲಿ ಕಲ್ಯಾಣ ಮಂಟಪಗಳಿಗೂ ಸೂಚನೆ ನೀಡಿದ್ದು, ವಾರ ಕಾಲ ಯಾವುದೇ ಸಭೆ, ಸಮಾರಂಭ ಮಾಡಂದತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಬೇಕರಿ ಹಾಗೂ ಹೋಟೆಲ್‌ ಗಳ ಮಾಲೀಕರ ಸಭೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೆ, ಪಟ್ಟಣದಲ್ಲಿ ಹಂದಿಗಳನ್ನು ಸದ್ಯಕ್ಕೆ ಬೇರೆಕಡೆಗೆ ಸಾಗಿಸುವಂತೆ ಹಂದಿಗಳ ಮಾಲೀಕರಿಗೆ ನೋಟಿಸ್‌ ನೀಡಿ ತಿಳಿವಳಿಕೆ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಯೂಸುಫ್‌ ಮಾಹಿತಿ ನೀಡಿದ್ದಾರೆ.

ಮಾಂಸದ ಅಂಗಡಿ ಬಂದ್‌: ಚಿಟಗುಪ್ಪ ತಾಲೂಕಿನ ಮನ್ನಾಏಖೇಳ್ಳಿ ಗ್ರಾಮ ಪಂಚಾಯತ ವತಿಯಿಂದ ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಸಭೆ ನಡೆಸಿದ್ದು, ಗ್ರಾಮದ ಎಲ್ಲ ಮಾಂಸದ ಅಂಗಡಿಗಳನ್ನು ಬಂದ್‌ ಮಾಡುವಂತೆ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಹಳ್ಳಿಖೇಡಕರ್‌ ತಿಳಿಸಿದ್ದಾರೆ.

ಅಲ್ಲದೆ, ಗ್ರಾಮದಲ್ಲಿನ ಹೋಟೆಲ್‌, ಬೇಕರಿ, ತಳ್ಳುವ ಬಂಡಿಗಳು ಮಾರಾಟ ಮಾಡುವ ಆಹಾರವನ್ನು ಸದ್ಯಕ್ಕೆ ನಿಲ್ಲಿಸಬೇಕು. ಕೊರೊನಾ ಸೋಂಕಿನ ಹಾವಳಿ ಕಡಿಮೆ ಆಗುವರೆಗೆ ಜನರು ಸಹಕಾರ ನೀಡಬೇಕು. ರಾಷ್ಟ್ರೀಯ ಹದ್ದಾರಿಗೆ ಅಂಟಿಕೊಂಡು ಗ್ರಾಮ ಇರುವ ಕಾರಣ ಎಲ್ಲ ಗ್ರಾಮಸ್ಥರು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next