ಹುಮನಾಬಾದ: ಶಿಕ್ಷಕರು ವರ್ಗ ಕೋಣೆಯಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳುವ ಹವ್ಯಾಸ ಹಾಗೂ ಸಂಶೊಧನಾ ಮನೋಭಾವ ಹೆಚ್ಚಿಸಿದಲ್ಲಿ ಅವರು ಹೊಸದನ್ನು ಸೃಷ್ಟಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಕ್ರಿಯಾಶೀಲತೆಯನ್ನು ಯಾವುದೇ ಕಾರಣಕ್ಕೂ ಕೇವಲ ಭಾವಿಸದೇ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಬೀದರ್ ಡಯಟ್ ಪ್ರಾಚಾರ್ಯ ಶಶಿಕಾಂತ ಮರ್ತುಳೆ ಸಲಹೆ ನೀಡಿದರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಇನ್ ಸ್ಪೈರ್ ಅವಾರ್ಡ್ ಪೂರ್ವಭಾವಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವಿದ್ಯಾರ್ಥಿಗಳಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಮನೆಯಲ್ಲಿ ತಂದಿಟ್ಟ ಯಾವುದೋ ವಸ್ತುವನ್ನು ಮಗು ಚೆಲ್ಲಾಪಿಲ್ಲಿಯಾಗಿ ಬಿಚ್ಚಿಟ್ಟರೆ ಹಾಳಾಯಿತೆಂದು ಬೈಯದೇ ಅದನ್ನು ಕುತೂಹಲದಿಂದ ವೀಕ್ಷಿಸಿ ಅದರ ಕ್ರಿಯಾಶೀಲತೆ ಪ್ರಶಂಸಿದಲ್ಲಿ ಮಗು ಭವಿಷ್ಯದಲ್ಲಿ ಖಂಡಿತ ದೊಡ್ಡ ವಿಜ್ಞಾನಿ ಮಾತ್ರವಲ್ಲದೇ ದೊಡ್ಡ ಸಾಧಕನಾಗುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಹಿಯಾಳಿಸದೇ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಯಟ್ ಹಿರಿಯ ಉಪನ್ಯಾಸಕ ಹಾಗೂ ಇನ್‌ಸ್ಪೈರ್ ಜಿಲ್ಲಾ ನೋಡಲ್ ಅಧಿಕಾರಿ ದೇವೀಂದ್ರ ಖಂಡೋಳ್ಕರ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಎಂದಾಕ್ಷಣ ಶಿಕ್ಷಕ ಹಾಗೂ ಮಕ್ಕಳ ಗಮನಕ್ಕೆ ಮೊದಲು ಬರುವುದು ಧರ್ಮಾಕೂಲ್. ಹಳೆಯ ಪದ್ಧತಿಯನ್ನು ತೊರೆದು ಇಲಾಖೆ ವತಿಯಿಂದ ಪ್ರತೀ ಸ್ಪರ್ಧೆಗೆ ರೂ.10 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು, ಕೊಟ್ಟ ಹಣದಲ್ಲಿ ಉಳಿತಾಯ ಮಾಡುವ ಯೋಚನೆ ಮಾಡದೇ ಹೆಚ್ಚುವರಿ ಹಣ ತಗುಲಿದರೂ ಭರಿಸಿ, ಸಮಾಜಕ್ಕೆ ಹೊಸ ಸಂದೇಶ ನೀಡುವ ವಿನೂತನ ಪ್ರಯೋಗದತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೋತ್ಸಾಹ ಧನದ ಸದ್ಬಳಕೆ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಬೇಕು. ತಾಲೂಕು ಮಟ್ಟದ ಸ್ಪರ್ಧೆಗೆ 10 ಸಾವಿರ ರೂ., ಇಲ್ಲಿ ಆಯ್ಕೆಗೊಂಡ ಜಿಲ್ಲಾ ಮಟ್ಟದ ಸ್ಪರ್ಧೆಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ನೀಡಿದ ಹಣ ಸದ್ಬಳಕೆ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಯತ್ನಿಸಬೇಕು ಎಂದರು.
ಖಲೀಲ್ ಅಹ್ಮದ್, ಓಂಕಾರ ರೂಗನ್, ಮಾರುತಿ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಆರ್‌ಸಿ ಶಿವಕುಮಾರ ಪಾರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿ ಪ್ರಕಾಶ ಬೊಂಬುಳಗಿ ನಿರೂಪಿಸಿದರು. ಬಿಆರ್‌ಪಿ ಧನಶ್ರೀ ವಂದಿಸಿದರು.