ಹುಮನಾಬಾದ: ಬೀದರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿದೆ. ರವಿವಾರ ಹುಮನಾಬಾದ್ ತಾಲೂಕಿನ ಎರಡು ಗ್ರಾಮಗಳ ಮೂರು ಮಕ್ಕಳಲ್ಲಿ ಸೋಂಕು ಪತ್ತೆ ಆಗಿದ್ದು, ಗ್ರಾಮೀಣ ಜನರ ನಿದ್ದೆಗೆಡಿಸಿದೆ.
ಮುಂಬಯಿನಿಂದ ಬಂದ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ತಾಲೂಕಿನ ಲಾಲಧರಿ ತಾಂಡಾದ ಒಂದೇ ಕುಟುಂಬದ 7 ವರ್ಷ ಹಾಗೂ 9 ವರ್ಷದ ಇಬ್ಬರು ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಕ್ಕಳ ಪಾಲಕರು ಮುಂಬಯಿನಿಂದ ಎಂ.ಆರ್ ಟ್ರಾವೆಲ್ಸ್ ಮೂಲಕ ಪ್ರಯಾಣಿಸಿ ಲಾಲಧರಿ ಗ್ರಾಮಕ್ಕೆ ತಲುಪಿದ್ದರು. ಇವರು ಪ್ರಯಾಣಿಸಿದ ಬಸ್‌ನಲ್ಲಿ ಸುಮಾರು 44 ಜನರಿದ್ದರು. ಈ ಪೈಕಿ 39 ಜನರನ್ನು ಬಸವಕಲ್ಯಾಣ ತಾಲೂಕಿನ ಅತಿವಾಳ ತಾಂಡಾದ ವಸತಿ ನಿಲಯದ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬಯಿನಿಂದ ಬಂದಿರುವ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮದ ಒಳಗೆ ಬರುವ ಮುನ್ನ ಅಧಿಕಾರಿಗಳಿಗೆ ಮಾಹಿತಿ ನೀಡಿ ವಸತಿ ನಿಲಯದಲ್ಲಿ ಇರಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಹಳ್ಳಿಖೇಡ (ಕೆ) ವಸತಿ ಶಾಲೆಯಲ್ಲಿ ಸೋಂಕಿತರನ್ನು ಇರಿಸಲಾಗಿತ್ತು. ಅದೇ ರೀತಿ ತಾಲೂಕಿನ ಹಣಕುಣಿ ಗ್ರಾಮದ ಕುಟುಂಬವೊಂದು ಮುಂಬಯಿನಿಂದ ಬಂದಿದ್ದು, 17 ತಿಂಗಳ ಮಗುವಿಗೆ ಸೋಂಕು ಇರುವುದು ಪತ್ತೆಯಾಗಿದೆ. ಮಗುವಿನ ತಂದೆ-ತಾಯಿಗಳ ಜೊತೆಗೆ ಇತರೆ 3 ಜನ ಸಂಬಂಧಿಕರು ಕೂಡ ಪ್ರಯಾಣ ಮಾಡಿ ಗ್ರಾಮ ಸೇರಿದ್ದಾರೆ. ಮುಂಬಯಿನಿಂದ ಆಟೋ ಹಾಗೂ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿ ಇಲ್ಲಿಗೆ ಬಂದಿದ್ದಾರೆ. ಇವರ ಸಂಬಂಧಿಕರಾದ ಮೂರು ಜನರು ಕಲಬುರಗಿ ಜಿಲ್ಲೆಯ ಚೂಮನಚೋಡ್ ಗ್ರಾಮಕ್ಕೆ ತೆರಳಿದ್ದಾರೆ. ಇವರು ಕೂಡ ಹಳ್ಳಿಖೇಡ (ಕೆ) ವಸತಿ ನಿಲಯದಲ್ಲಿನ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದು, ಮಗುವಿಗೆ ಪರೀಕ್ಷೆ ನಡೆಸಿದ್ದು, ಇದೀಗ ಪಾಸಿಟಿವ್ ವರದಿ ಬಂದಿದೆ. ಇಲ್ಲಿನ ವೈದ್ಯರು 10 ವರ್ಷದ ಒಳಗಿನ ಮಕ್ಕಳಿಗೆ ಮೊದಲ ಆದ್ಯತೆ ನೀಡಿ ಸ್ಯಾಂಪಲ್ ತೆಗೆದು ಪರೀಕ್ಷೆಗೆ ಕಳುಹಿಸಿದ ಹಿನ್ನೆಲೆಯಲ್ಲಿ ಮೂರು ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಹಳ್ಳಿಖೇಡ (ಕೆ) ಕ್ವಾರಂಟೈನ್ ಕೇಂದ್ರಕ್ಕೆ ತಹಶೀಲ್ದಾರ್ ನಾಗಯ್ನಾ ಹಿರೇಮಠ, ಕೋವಿಡ್ ತಾಲೂಕು ಉಸ್ತುವಾರಿ ಡಾ| ಗೋವಿಂದ, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ ಮೈಲಾರೆ, ಚಿಟಗುಪ್ಪ ಆಸ್ಪತ್ರೆ ಅಧಿಕಾರಿ ಡಾ| ವೀರನಾಥ ಕನಕ, ಪಿಎಸ್‌ಐ ಸುರೇಶ ಭಾವಿಮನಿ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪಾಸಿಟಿವ್ ಪತ್ತೆಯಾದ ಮಕ್ಕಳನ್ನು ಬೀದರ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಅಲ್ಲದೆ, ಇದೀಗ ಮಕ್ಕಳ ಪಾಲಕರು ಹಾಗೂ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸ್ಯಾಂಪಲ್ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.