ಹುಮನಾಬಾದ: ಬಾಲ ಕಾರ್ಮಿಕ ಮುಕ್ತ ಕರ್ನಾಟಕವಾಗಿಸಲು ಸಂಬಂಧಪಟ್ಟ ಇಲಾಖೆ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕಂಕಣ ಬದ್ಧರಾಗಬೇಕು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿದೇವಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಿಮಿತ್ತ ಶುಕ್ರವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಕಲಿಯಬೇಕಾದ ವಯಸ್ಸಿನಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಗ್ಯಾರೇಜ್, ಹೊಟೇಲ್, ಗುಜರಿ, ಕಿರಾಣಿ, ಬಾರ್ ಮತ್ತು ರೆಸ್ಟೊರೆಂಟ್ ಮತ್ತಿತರ ಕೂಲಿ ಕೆಲಸಕ್ಕೆ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಂಥ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅಂಥ ಮಕ್ಕಳನ್ನು ಕೂಲಿ ಕೆಲಸದಿಂದ ಮುಕ್ತಗೊಳಿಸಿ, ಮುಖ್ಯವಾಹಿನಿಗೆ ತರಲು ಯತ್ನಿಸಲಾಗುವುದು. ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳುವವರು ಮಾತ್ರವಲ್ಲದೇ ಅದಕ್ಕೆ ಪ್ರೋತ್ಸಾಹಿಸಿದವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಉಮೇಶ ಮಠದ ವಿಶೇಷ ಉಪನ್ಯಾಸ ನೀಡಿ, 1948 ಸಮೀಕ್ಷೆ ಪ್ರಕಾರ ಪ್ರತೀ 4 ಮಕ್ಕಳಲ್ಲಿ ಒಬ್ಬ ಬಾಲ ಕಾರ್ಮಿಕನಿದ್ದ. 2011ರ ಸಮೀಕ್ಷೆ ಪ್ರಕಾರ ಪ್ರತೀ 11ಮಕ್ಕಳಲ್ಲಿ 1ಬಾಲ ಕಾರ್ಮಿಕ ಇರುವುದು ಪತ್ತೆಯಾದರೆ, 2017-18ನೇ ಸಾಲಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಪ್ರತೀ 17 ಮಕ್ಕಳಿಗೆ ಒಬ್ಬ ಬಾಲ ಕಾರ್ಮಿಕ ಇರುವುದಾಗಿ ತಿಳಿದುಬಂದಿದೆ. ಸರ್ಕಾರ, ಸಂಘ ಸಂಸ್ಥೆಗಳು ನಿರಂತರ ಪರಿಶ್ರಮ ಪಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಇಳಿಮುಖ ಆಗಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ಪಾಲಕರು ಧಿಕ್ಕರಿಸಬೇಕು. ಕೆಲಸಕ್ಕೆ ಹೋಗಲು ಹಿಂದೇಟು ಹಾಕುವ ಮನೋಭಾವವನ್ನು ಪಾಲಕರು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಬಸಲಿಂಗಪ್ಪ ದೊಡ್ಮನಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಮಾಧ್ಯಮಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂದರು. ಆರ್ಬಿಟ್ ಸಂಸ್ಥೆಯ ರವಿ ಕೊಡ್ಡಿಕರ್ ಮಾತನಾಡಿ, ತಾಲೂಕಿನಲ್ಲಿ 114 ಮಕ್ಕಳು ಬಾಲಕಾರ್ಮಿಕರಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಮಕ್ಕಳಿಗೆ ಯಾವುದೇ ರೀತಿಯ ಶೋಷಣೆಯಾದಲ್ಲಿ 1098ಗೆ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧಿಧೀಶ ಗಗನ್ ಎಂ.ಆರ್. ಕಾರ್ಮಿಕ ನಿರೀಕ್ಷಕಿ ಕವಿತಾ ಹೊನ್ನಾಳೆ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಎಂ. ಕುದರೆ, ವಕೀಲರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಸಿ.ಎಸ್.ಚನ್ನಪ್ಪ ವೇದಿಕೆಯಲ್ಲಿ ಇದ್ದರು. ಭೀಮಣ್ಣ ಓತಗಿಕರ್ ಸ್ವಾಗತಿಸಿದರು. ಕೆ.ಶ್ರೀಮಂತ ವಂದಿಸಿದರು. ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಮತ್ತಿತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.